ಜಿಲ್ಲೆಯನ್ನೇ ಬೆಚ್ಚಿಬಿಳಿಸಿದ್ದ ಶ್ರೀಮತಿ ಶೆಟ್ಟಿ ಬರ್ಬರ ಹತ್ಯೆಯ ಆರೋಪಿಗಳ ಬಂಧನ
ಮಂಗಳೂರು ಮೇ 15: ಇಡೀ ಜಿಲ್ಲೆಯನ್ನೆ ಬೆಚ್ಚಿಬಿಳಿಸಿದ್ದ ವಿವಾಹಿತ ಮಹಿಳೆಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ವೆಲೆನ್ಸಿಯಾದ ಜೋನಸ್ ಜೂಲಿಸ್ ಸ್ಯಾಮ್ಸನ್(36), ಆತನ ಪತ್ನಿ ವಿಕ್ಟೋರಿಯಾ (46) ಎಂದು ಗುರುತಿಸಲಾಗಿದ್ದು, ಹಣದ ವ್ಯವಹಾರ ಈ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.
ನಗರದ ಮಂಗಳಾದೇವಿ ಬಳಿಯ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿ ದೇಹದ ಭಾಗಗಳನ್ನು ಕತ್ತರಿಸಿ ಬಳಿಕ ರುಂಡ-ಮುಂಡ, ಕೈಕಾಲು ಪ್ರತ್ಯೇಕಿಸಿ ಕದ್ರಿ ಕೆಪಿಟಿ, ಕದ್ರಿ ಪಾರ್ಕ್, ನಂದಿಗುಡ್ಡ ಪರಿಸರದಲ್ಲಿ ಎಸೆದಿದ್ದರು.
ಬಂಧಿತ ಆರೋಪಿ ಜೋನಸ್ ಜ್ಯೂಲಿ ನ್ ಸ್ಯಾಮ್ಸನ್ ಶ್ರೀಮತಿ ಶೆಟ್ಟಿಯಿಂದ ಸಾಲ ರೂಪದಲ್ಲಿ 1 ಲಕ್ಷ ರೂಪಾಯಿ ಹಣಪಡೆದಿದ್ದ, ಸ್ವಲ್ಪ ಸಾಲವನ್ನ ಮರು ಪಾವತಿಸಿ 60 ಸಾವಿರ ರೂಪಾಯಿ ಹಣವನ್ನು ಬಾಕಿ ಇರಿಸಿದ್ದ ಎಂದು ಹೇಳಲಾಗಿದ್ದು, ಬಾಕಿ ಹಣವನ್ನು ಕೊಡುವಂತೆ ಜೊನಸ್ ಮನೆಗೆ ಹೋಗಿ ಶ್ರೀಮತಿ ಶೆಟ್ಟಿ ಕೇಳಿದ್ದರು. ಈ ವೇಳೆ ಮನೆಯಲ್ಲೇ ಶ್ರೀಮತಿ ಶೆಟ್ಟಿಯ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಕೊಲೆಗೈದ ಬಳಿಕ ಜೋನಸ್ ಮತ್ತು ಆತನ ಪತ್ನಿ ವಿಕ್ಟೋರಿಯಾ ಮಥಾಯಿಸ್ ಶ್ರೀಮತಿ ಶೆಟ್ಟಿ ಅವರ ದೇಹವನ್ನು ತುಂಡರಿಸಿದ್ದರು, ನಂತರ ತುಂಡರಿಸಿದ ದೇಹವನ್ನು ಬಿಸಾಕಲು ಆರೋಪಿಗಳ ಸ್ನೇಹಿತ ರಾಜು ಸಹಾಯ ಮಾಡಿದ್ದ.
ಇಡೀ ಜಿಲ್ಲೆಯನ್ನು ಬೆಚ್ಚಿಬಿಳಿಸಿದ್ದ ಈ ಕೊಲೆಯ ಆರೋಪಿಗಳನ್ನು ಬಂಧಿಸಲು ಅಧಿಕಾರಿ ಸಿಬ್ಬಂದಿ ಸೇರಿ ಮೂವತ್ತು ಮಂದಿಯ ಮೂರು ತಂಡ ರಚನೆ ಮಾಡಲಾಗಿತ್ತು. ಘಟನೆ ಬೆಳಕಿಗೆ ಬಂದ ಮೂರೇ ದಿನದಲ್ಲಿ ಪ್ರಕರಣ ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಜೋನಸ್ ನನ್ನು ಬಂಧಿಸಲು ತೆರಳುತ್ತಿದ್ದ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಸ್ತುತ ಫಾದರ್ ಮುಲ್ಲರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಂಧಿತ ಆರೋಪಿಗಳಿಂದ ದ್ವಿಚಕ್ರ ವಾಹನ, ಮೃತಳ ಎಂಟು ಚಿನ್ನದ ಉಂಗುರ, ಒಂದು ಚೈನ್ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿ ಜೋನಸ್ ಮೇಲೆ ಪಾಂಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಇದ್ದು, 2010 ಜಾನ್ ಮೇರಿ ಮೆಂಡೋನಾ ಎಂಬವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.