DAKSHINA KANNADA
ಜಲಸ್ಪೋಟ ರೀತಿ ಸುರಿದ ಮಳೆಗೆ ಜಲಾವೃತವಾದ ಕುಕ್ಕೆ ಸುಬ್ರಹ್ಮಣ್ಯ ಪರಿಸರ
ಜಲಸ್ಪೋಟ ರೀತಿ ಸುರಿದ ಮಳೆಗೆ ಜಲಾವೃತವಾದ ಕುಕ್ಕೆ ಸುಬ್ರಹ್ಮಣ್ಯ ಪರಿಸರ
ಪುತ್ತೂರು ಸೆಪ್ಟೆಂಬರ್ 23: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಜೆ ಸುರಿದ ಧಿಡೀರ್ ಮಳೆ ಪ್ರವಾಹ ಪರಿಸ್ಥಿತಿ ತಂದು ಸ್ವಲ್ಪಕಾಲ ಆತಂಕ ಸೃಷ್ಟಿಸಿದೆ.
ಕುಮಾರಪರ್ವತದ ತಪ್ಪಲು ಪ್ರದೇಶ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತ ಸತತವಾಗಿ ನಾಲ್ಕು ಗಂಟೆ ಭಾರೀ ಮಳೆ ಸುರಿದಿದೆ. ಸುರಿದ ಮಳೆ ಪ್ರಮಾಣಕ್ಕೆ ದರ್ಪಣ ತೀರ್ಥ ತುಂಬಿ ಹರಿದು ಆದಿಸುಬ್ರಹ್ಮಣ್ಯ ದೇಗುಲದ ಹೊರಾಂಗಣಕ್ಕೆ ನೀರು ನುಗ್ಗಿ ಆದಿ ದೇಗುಲದ ಅಶ್ವತ್ಥ ಕಟ್ಟೆ ಮುಳುಗಡೆಗೊಂಡಿತ್ತು.
ಮಳೆಯಿಂದಾಗಿ ದೇಗುಲದ ಆವರಣದೊಳಕ್ಕೆ ನೆರೆ ನೀರು ಹರಿದಿದೆ ಅಲ್ಲದೆ ತೀರ್ಥ ಸ್ನಾನ ನೆರವೇರಿಸುವಲ್ಲಿ ಮೆಟ್ಟಿಲ ತನಕ ನೀರು ಹರಿದು ಅಲ್ಲೆ ಪಕ್ಕದಲ್ಲೇ ಇರುವ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಹಿಂಭಾಗದ ಕೆಲವು ಪ್ರದೇಶಗಳು ಮುಳುಗಡೆಗೊಂಡವು.
ದರ್ಪಣ ತೀರ್ಥ ನದಿ ಪಾತ್ರದ ಕೃಷಿ ಭೂಮಿ ಜಲಾವೃತಗೊಂಡವು. ಇಂತಹ ಮಳೆ ಈ ಹಿಂದೆ ಬಂದಿದ್ದರೂ ದರ್ಪಣ ತೀರ್ಥ ನದಿಯಲ್ಲಿ ಈ ಬಾರಿ ಇಷ್ಟೊಂದು ಪ್ರಮಾಣದಲ್ಲಿ ನೆರೆ ಹರಿದಿರುವುದು ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ. ಮಳೆ ನಿಂತ ಅರ್ಧ ತಾಸಿನಲ್ಲಿ ಪ್ರವಾಹ ಕೂಡ ಇಳಿಯಿತು.