LATEST NEWS
ಮಲ್ಪೆ – ಮೀನುಗಾರಿಕಾ ಕಚೇರಿ ಮೀಟಿಂಗ್ ರೂಮ್ ನಲ್ಲಿ ಬೆಂಕಿ ಅವಘಡ
ಉಡುಪಿ ಡಿಸೆಂಬರ್ 18: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮಲ್ಪೆ ಮೀನುಗಾರಿಕೆ ಇಲಾಖೆಯ ಕಚೇರಿಯಲ್ಲಿ ಮೀಟಿಂಗ್ ರೂಮ್ ಸುಟ್ಟು ಕರಕಲಾದ ಘಟನೆ ಮಲ್ಪೆಯಲ್ಲಿ ನಡೆದಿದೆ.
ಬೆಳಗ್ಗೆ ಕಚೇರಿ ತೆರೆದಾಗಲೇ ವಿಷಯ ಬೆಳಕಿಗೆ ಬಂದಿದ್ದು, ಉರಿಯುತ್ತಿದ್ದ ಅವಶೇಷಗಳನ್ನು ಅಗ್ನಿಶಾಮಕ ದಳದವರು ನಂದಿಸಿದ್ದಾರೆ. ರೂಮ್‌ನೊಳಗಿದ್ದ ಹವಾನಿಯಂತ್ರಕ ಯಂತ್ರ ಸ್ಫೋಟಗೊಂಡಿದ್ದು, ರೂಮ್‌ನ ಒಳಗಿದ್ದ ಎಲ್ಲ ಕಡತಗಳು ಸುಟ್ಟು ಬೂದಿಯಾಗಿವೆ. ಫ್ಯಾನ್, ಚಯರ್, ಟೇಬಲ್, ಲೈಫ್‌ಬಾಯ್, ಲೈಫ್ಜಾಕೆಟ್, ಸೇರಿದಂತೆ ಪಾರ್ಟಿಶನ್ ಗೋಡೆ ಸಂಪೂರ್ಣ ಹಾನಿಯಾಗಿದೆ. ಬೆಂಕಿ ಇತರ ಕೋಣೆಯನ್ನು ಆವರಿಸಿದರೆ ಈ ಕಟ್ಟಡ ಪೂರ್ತಿ ಬೆಂಕಿಗಾಹುತಿಯಾಗುತ್ತಿತ್ತು ಎನ್ನಲಾಗಿದೆ.
ದಟ್ಟವಾದ ಹೊಗೆ ಕಟ್ಟಡದ ಎಲ್ಲ ಕೋಣೆಗಳನ್ನು ಆವರಿಸಿದ್ದು, ಗೋಡೆ ಕಪ್ಪು ಬಣ್ಣಕ್ಕೆ ತಿರುಗಿದೆ. ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಗೆ ದೂರು ನೀಡಲಾಗಿದೆ.