LATEST NEWS
ಬಾಕ್ರಬೈಲ್‌ನಲ್ಲಿ ಶೂಟೌಟ್ – ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ ಗುಂಡೇಟು!

ಮಂಜೇಶ್ವರ, ಏಪ್ರಿಲ್ 28: ಬೈಕ್ನಲ್ಲಿ ತೆರಳುತಿದ್ದ ಯುವ ಅಡಿಕೆ ವ್ಯಾಪಾರಿಗೆ ಗುಂಡೇಟು ತಗಲಿರುವ ಘಟನೆ ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಗಡಿಭಾಗ ಮುಡಿಪು ಸಮೀಪದ ಕಜೆಪದವು ಎಂಬಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ.
ಬಾಕ್ರಬೈಲ್ ನಡೀಬೈಲು ನಿವಾಸಿ ಸವಾದ್ (20) ಎಂಬಾತನ ಮೇಲೆ ಶೂಟೌಟ್ ನಡೆದಿದೆ. ನಿನ್ನೆ ಸಂಜೆ ವೇಳೆ ಬೈಕ್ ನಲ್ಲಿ ಮನೆ ಕಡೆಗೆ ತೆರಳುವ ಸಂದರ್ಭ ಕಜೆಪದವು ತಿರುವಿನಲ್ಲಿ ಈ ಶೂಟೌಟ್ ನಡೆದಿದೆ.

ಕಾಲಿಗೆ ಗಂಭೀರ ಗಾಯಗೊಂಡ ಸಾವಾದ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಿ ಬೇಟೆ ಬಂದವರು ತಪ್ಪಿ ಗುಂಡು ಹಾರಿಸಿರುವ ಸಾಧ್ಯತೆ ಇರುವುದಾಗಿ ಮಂಜೇಶ್ವರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರ್ಷಾದ್ ವರ್ಕಾಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಗಾಂಜಾ ವ್ಯಸನಿಗಳು ಅಥವಾ ವ್ಯಾಪಾರಿಗಳು ಕೃತ್ಯ ಎಸೆದಿರುವ ಸಾಧ್ಯತೆಯೂ ವ್ಯಕ್ತವಾಗಿದೆ.
ಬೈಕ್ ನಲ್ಲಿ ತೆರಳುವ ಸಂದರ್ಭ ನಿರ್ಜನ ಪ್ರದೇಶದಲ್ಲಿ ವಾಹನದ ಹೆಡ್ಲೈಟ್ ಕಾಣಿಸಿದ್ದು., ಅದನ್ನು ಗಮನಿಸಿ ಸವಾದ್ ಬೈಕ್ ನಿಲ್ಲಿಸಿದ ಕಾರಣಕ್ಕೆ ಶೂಟೌಟ್ ನಡೆದಿದೆ ಅನ್ನುವ ಮಾತುಗಳು ಕೇಳಿಬಂದಿದೆ. ಮಂಜೇಶ್ವರ ಠಾಣಾ ಪೋಲೀಸರು ಕೇಸು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.