Connect with us

    LATEST NEWS

    ಹೆಚ್ಚು ಉದ್ಯೋಗ ದೊರೆಯುವ ಕೈಗಾರಿಕಾ ಘಟಕಗಳಿಗೆ ಆರ್ಥಿಕ ನೆರವು ನೀಡಿ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

    ಉಡುಪಿ, ಸೆಪ್ಟಂಬರ್ 25 : ಜಿಲ್ಲೆಯಲ್ಲಿ ಯುವಜನರಿಗೆ ಹೆಚ್ಚು ಉದ್ಯೋಗ ದೊರೆಯುವಂತಹ ಆಹಾರ ಸಂಸ್ಕರಣಾ ಘಟಕ ಸೇರಿದಂತೆ ಮತ್ತಿತರ ಕೈಗಾರಿಕೆಗಳನ್ನು ಸ್ಥಾಪಿಸಲು ಆರ್ಥಿಕ ನೆರವನ್ನು ನೀಡಲು ಹೆಚ್ಚಿನ ಆದ್ಯತೆಯನ್ನು ಬ್ಯಾಂಕ್‌ಗಳು ನೀಡಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾಂಕ್‌ಗಳು ಜನಸ್ನೇಹಿಯಾಗಿ ಗ್ರಾಹಕರೊಂದಿಗೆ ವ್ಯವಹರಿಸಬೇಕು. ಸರಕಾರದ ಯೋಜನೆಗಳ ಫಲಾನುಭವಿಗಳು ಆರ್ಥಿಕ ನೆರವನ್ನುಕೋರಿ ಬಂದ ಅರ್ಜಿಗಳನ್ನು ವಿಳಂಬವಿಲ್ಲದೇ ಅವರುಗಳನ್ನು ಬ್ಯಾಂಕ್‌ಗಳಿಗೆ ಅಲೆದಾಡಿಸದೇ ನಿಯಮಾನುಸಾರವಾಗಿ ವಿಲೇವಾರಿ ಮಾಡಿ, ನೆರವನ್ನು ಕಲ್ಪಿಸಬೇಕು ಎಂದರು. ಸರಕಾರದ ಸಬ್ಸಿಡಿ ಆಧಾರಿತ ಯೋಜನೆಗಳ ಆಯ್ಕೆಯಾಗಿ ವಿವಿಧ ಇಲಾಖೆಗಳಿಂದ ಬಂದ ಫಲಾನುಭವಿಗಳು ಇದರ ಲಾಭ ಪಡೆಯಲು ಬ್ಯಾಂಕ್‌ಗಳಿಗೆ ಯಾವೆಲ್ಲಾ ನಿಖರ ದಾಖಲೆಗಳನ್ನು ಹಾಜರುಪಡಿಸಬೇಕು, ಯಾವ ಕಾರಣಕ್ಕೆಲ್ಲಾ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂಬ ಸವಿವರವಾದ ಮಾಹಿತಿಗಳನ್ನು ಗ್ರಾಮ ಪಂಚಾಯತ್ ಕಚೇರಿಯ ಸೂಚನಾ ಫಲಕಗಳಲ್ಲಿ ಕರಪತ್ರಗಳನ್ನು ಪ್ರದರ್ಶಿಸಿದ್ದಲ್ಲಿ ವಿನಾಕಾರಣ ಗೊಂದಲಗಳನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಎಂದರು. ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯವಿರುವ ಸ್ಥಳದ ಅವಕಾಶವನ್ನು ಒದಗಿಸಲು ಮುಂದಾಗುವುದರ ಜೊತೆಗೆ ಅವುಗಳು ದೊಡ್ಡ ಮಟ್ಟದಲ್ಲಿ ಬೆಳೆಸಲು ಇಲಾಖೆಯ ಅಧಿಕಾರಿಗಳು ಯೋಚಿಸಬೇಕು ಎಂದರು.

    ಕೃಷಿ, ಮೀನುಗಾರಿಕೆಗಳಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಸಾಲಗಳನ್ನು ವಿತರಿಸಲು ಆದ್ಯತೆ ನೀಡಬೇಕು ಎಂದ ಅವರು, ಜಿಲ್ಲೆಯಲ್ಲಿ ಮೀನು ಉತ್ಪಾದನೆ ಹೇರಳವಾಗಿದ್ದರೂ, ಇಲ್ಲಿಂದ ವಿದೇಶಗಳಿಗೆ ರಫ್ತು ಆಗದೇ ನೆರೆ ರಾಜ್ಯ ಕೇರಳಕ್ಕೆ ಹೋಗಿ ಅಲ್ಲಿಂದ ಹೊರದೇಶಗಳಿಗೆ ಹೋಗುತ್ತಿವೆ. ಅದು ಇಲ್ಲಿಂದಲೇ ಆಗುವಂತೆ ಉತ್ತೇಜಿಸಬೇಕು ಎಂದರು. ಮುದ್ರಾ ಸಾಲ ಯೋಜನೆಯಡಿ ಅರ್ಜಿ ಸಲ್ಲಿಸಲು ಬಂದಾಗ ಅವುಗಳಲ್ಲಿ ಹೆಚ್ಚು ತಿರಸ್ಕಾರ ವಾಗುತ್ತಿವೆ ಎಂಬ ಬಗ್ಗೆ ಗಂಭೀರ ಆರೋಪ ಕೇಳಿ ಬರುತ್ತಿವೆ. ಅಲ್ಲದೇ ಈ ಯೋಜನೆಯು ನಿಂತು ಹೋಗಿದೆ ಎಂದು ಹೇಳುತ್ತಿರುವುದು ಸಹ ಕೇಳಿ ಬರುತ್ತಿದೆ. ಬ್ಯಾಂಕಿನವರು ಇದಕ್ಕೆ ಆಸ್ಪದ ನೀಡದೇ ಸರ್ಕಾರದ ನಿರ್ದೇಶನವನ್ನು ಸರಿಯಾಗಿ ಪಾಲಿಸಿ, ಈ ಯೋಜನೆಯಡಿ ಜನರಿಗೆ ನೆರವು ಒದಗಿಸಬೇಕು ಎಂದರು.

    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ 52,675 ಕೋಟಿ ರೂ. ಗಳಷ್ಟು ವ್ಯವಹಾರ ನಡೆದು, ಶೇ. 9.08 ರಷ್ಟು ಪ್ರಗತಿ ಸಾಧಿಸಿದೆ. ಕಳೆದ ಬಾರಿಗಿಂತ 4386 ಕೋಟಿ ಹೆಚ್ಚಾಗಿದೆ ಎಂದರು. ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ ಬ್ಯಾಂಕ್‌ಗಳೂ ಶೇ. 108 ರಷ್ಟು ಪ್ರಗತಿ ಸಾಧಿಸಿವೆ. 173 ರಷ್ಟು ಗುರು ಇದ್ದು, 187 ರಷ್ಟು ಸಾಧನೆಯಾಗಿ 20.41 ಕೋಟಿ ರೂ. ಗಳಷ್ಟು ಉದ್ಯೋಗ ಸಾಲವಾಗಿ ನೀಡಲಾಗಿದೆ ಎಂದರು.ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿಯಲ್ಲಿ 2819 ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಗುರಿ ಹೊಂದಿ, ಮೊದಲನೇ ಹಂತದಲ್ಲಿ 4162 ಜನರಿಗೆ ಸಾಲ ವಿತರಿಸಿ, ರಾಜ್ಯದಲ್ಲಿಯೇ ಈ ಯೋಜನೆ ಅನುಷ್ಠಾನದಲ್ಲಿ ಮೊದಲನೇ ಸ್ಥಾನದಲ್ಲಿದೆ. ಎರಡನೇ ಹಂತದಲ್ಲಿ 2101 ಜನರಿಗೆ ಸಾಲ ವಿತರಿಸುವ ಗುರಿ ಇದ್ದು, ಈಗಾಗಲೇ 1702 ಜನರಿಗೆ ಸಾಲ ವಿತರಿಸಲಾಗಿದೆ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *