LATEST NEWS
ಸೋತು ಗೆದ್ದ ಶೋಭಾ ಕರಂದ್ಲಾಜೆ – ಉಡುಪಿ ಚಿಕ್ಕಮಗಳೂರಿನಿಂದ ಸೀದಾ ಬೆಂಗಳೂರು ಉತ್ತರಕ್ಕೆ
ಉಡುಪಿ ಮಾರ್ಚ್ 14: ಗೋಬ್ಯಾಕ್ ಅಭಿಯಾನದ ನಡುವೆಯೂ ಬೆಂಗಳೂರು ಉತ್ತರದಿಂದ ಟಿಕೆಟ್ ಪಡೆಯುವಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಯಶಸ್ವಿಯಾಗಿದ್ದಾರೆ. ಉಡುಪಿ ಚಿಕ್ಕಮಗಳೂರು ಎರಡೂ ಜಿಲ್ಲೆಯಲ್ಲೂ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಗೋ ಬ್ಯಾಕ್ ಅಭಿಯಾನ ಆರಂಭವಾಗಿತ್ತು. ಈ ಹಿನ್ನಲೆ ಶೋಭಾ ಕರಂದ್ಲಾಜೆಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆ ಇತ್ತು ಎಂದು ಹೇಳಲಾಗಿತ್ತು, ಆದರೆ ಬದಲಾದ ಸನ್ನಿವೇಶದಲ್ಲಿ ಬೆಂಗಳೂರು ಉತ್ತರದಿಂದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೊನೆಗೂ ಗೆದ್ದಿದ್ದಾರೆ. ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ವಪಕ್ಷೀಯರಿಂದಲೇ ಗೋಬ್ಯಾಕ್ ಶೋಭಕ್ಕಾ ಅಭಿಯಾನ ಸಂಸದೆಗೆ ಇರಿಸು ಮುರಿಸು ತಂದಿತ್ತು. ಯಾವುದೇ ಕಾರಣಕ್ಕೂ ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಟಿಕೆಟ್ ಕೊಡಬಾರದೆಂದು ಬಿಜೆಪಿಯ ಕಟ್ಟರ್ ಕಾರ್ಯಕರ್ತರೇ ಸಂಸದೆ ವಿರುದ್ದ ತಿರುಗಿ ಬಿದ್ದಿದ್ದರು, ಆದರೂ ತಲೆಗೆಡಿಸಿಕೊಳ್ಳದೇ ತನಗೆ ಟಿಕೆಟ್ ಎಂದು ಶೋಭಾ ಹೇಳುತ್ತಿದ್ದರು. ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಕೃಪಕಟಾಕ್ಷ ಶೋಭಾ ಅವರ ಮೇಲೆ ಇದಿತ್ತು. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಚಾಣಾಕ್ಷ ನಡೆ ಅನುಸರಿಸಿ, ಶೋಭಾ ಅವರನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ತೆಗೆದು ಬೆಂಗಳೂರು ಉತ್ತರಕ್ಕೆ ಕಳುಹಿಸಿದೆ.
ಉಡುಪಿ ಚಿಕ್ಕಮಗಳೂರು ಬಿಜೆಪಿಯ ಭದ್ರಕೋಟೆ ಇಲ್ಲಿ ಯಾರಾದರೂ ಅನಾಯಾಸವಾಗಿ ಗೆಲ್ಲಬಹುದಿತ್ತು. ಇದೀಗ ಡಿವಿ ಸದಾನಂದ ಗೌಡ ಅವರು ಸಂಸದರಾಗಿರುವ ಕ್ಷೇತ್ರಕ್ಕೆ ಶೋಭಾ ಅಭ್ಯರ್ಥಿ. ಆದರೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದಲೂ ಶೋಭಾಗೆ ಗೋ ಬ್ಯಾಕ್ ಬಿಸಿ ತಟ್ಟಿದೆ. ಬಿಎಸ್ ವೈ ಅವರ ಮೂಲಕ ಈ ಬಾರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರದಿಂದ ಆಯ್ಕೆಯಾಗುತ್ತಾರಾ ಎನ್ನುವುದನ್ನ ನೋಡಬೇಕಾಗಿದೆ.