FILM
ಸುದೀಪ್ ವಿವಾದಕ್ಕೆ ಶಿವಣ್ಣ ಎಂಟ್ರಿ: ಒಂದು ವಾರ ಕಾಯಿರಿ ಎಂದ ಶಿವರಾಜ್ ಕುಮಾರ್

ಕಿಚ್ಚ ಸುದೀಪ್ ಮೇಲೆ ನಿರ್ಮಾಪಕ ಎನ್.ಕುಮಾರ್ ಮಾಡಿದ ಆರೋಪ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಎನ್.ಕುಮಾರ್ ಅವರಿಗೆ ಕಾನೂನು ಮೂಲಕ ಉತ್ತರ ಕೊಡಲು ಸುದೀಪ್ ಮುಂದಾದಾಗ ಮತ್ತೋರ್ವ ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ಮೇಲೆ ಆರೋಪ ಮಾಡಿದರು. ದಿನದಿಂದ ದಿನಕ್ಕೆ ಆರೋಪಗಳು ಹೆಚ್ಚಾದಂತೆ ಕಿಚ್ಚನ ಅಭಿಮಾನಿಗಳು ಅಖಾಡಕ್ಕೆ ಇಳಿದರು. ಕುಮಾರ್ ಅವರು ಕ್ಷಮೆ ಕೇಳದರೆ ಇದ್ದರೆ ಕುಮಾರ್ ಮನೆ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಇಷ್ಟೆಲ್ಲ ಬೆಳವಣಿಗೆಗೆಳು ಆಗುತ್ತಿದ್ದಂತೆಯೇ ಚಿತ್ರೋದ್ಯಮದ ಹಲವರು ಈ ಘಟನೆಯ ಕುರಿತು ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಮಧ್ಯಸ್ಥಿಕೆ ವಹಿಸಿ ಪ್ರಕರಣವನ್ನು ತಿಳಿಗೊಳಿಸಬೇಕು ಎಂದು ಮನವಿ ಮಾಡಿಕೊಂಡರು. ಈ ವಿಷಯ ಶಿವರಾಜ್ ಕುಮಾರ್ ಅವರಿಗೂ ಗೊತ್ತಾಗಿದೆ. ಹಾಗಾಗಿ ನಿನ್ನೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವಾರ ಕಾಯಿರಿ ಎಲ್ಲವೂ ಸರಿ ಹೋಗುತ್ತದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಚಿತ್ರೋದ್ಯಮದಲ್ಲಿ ಇಂತಹ ಘಟನೆಗಳು ಜರುಗಿದಾಗ ಅಂಬರೀಶ್ ಎಲ್ಲವನ್ನೂ ಸರಿ ಮಾಡುತ್ತಿದ್ದರು. ಅಂಬರೀಶ್ ಕಾಲಾನಂತರ ಇಂಡಸ್ಟ್ರಿಯನ್ನು ಮುನ್ನೆಡೆಸಿಕೊಂಡು ಹೋಗುವವರು ಯಾರು ಎನ್ನುವ ಪ್ರಶ್ನೆ ಶುರುವಾಗಿತ್ತು. ಈ ನಡುವೆ ಚಿತ್ರೋದ್ಯಮದ ಹಲವರು ರವಿಚಂದ್ರನ್ ಮತ್ತು ಶಿವಣ್ಣ ಅವರಿಗೆ ಈ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಹಾಗಾಗಿ ಶಿವಣ್ಣ ತಿಳಿಗೊಳಿಸುವ ಮಾತುಗಳನ್ನು ಆಡಿದ್ದಾರೆ.
ಈಗಾಗಲೇ ಸುದೀಪ್ ಫಿಲ್ಮ್ ಚೇಂಬರ್, ಕಲಾವಿದರ ಸಂಘ ಮತ್ತು ನಿರ್ಮಾಪಕರ ಸಂಘಕ್ಕೆ ಪ್ರತ್ಯೇಕವಾಗಿ ಪತ್ರವನ್ನು ಬರೆದಿದ್ದಾರೆ. ದಯವಿಟ್ಟು, ಈ ವಿಷಯವನ್ನು ನಮ್ಮ ಪಾಡಿಗೆ ನಮಗೆ ಬಿಟ್ಟು ಬಿಡಿ. ನಾನೂ ಕೋರ್ಟಿನಲ್ಲಿ ತೀರ್ಮಾನ ಮಾಡಿಕೊಳ್ಳುತ್ತೇವೆ. ನನ್ನಿಂದ ತಪ್ಪಾಗಿದ್ದರೆ ಕೋರ್ಟ್ ನಲ್ಲೇ ತಲೆಗೆ ಬಾಗುತ್ತೇನೆ ಎಂದು ಖಡಕ್ ಸಂದೇಶ ರವಾಣಿಸಿದ್ದಾರೆ. ಹಾಗಾಗಿ ಶಿವಣ್ಣ ಮಾತಿಗೆ ಸುದೀಪ್ ಏನು ಹೇಳುತ್ತಾರೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.