Connect with us

    KARNATAKA

    ಶಿರೂರು ಗುಡ್ಡ ಕುಸಿತ ದುರಂತ: ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ

    ಕಾರವಾರ, ಜುಲೈ 23: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಭೂಕುಸಿತ ದುರಂತ ಸಂಭವಿಸಿ ಒಂದು ವಾರ ಕಳೆದಿದೆ. ಕಾರ್ಯಾಚರಣೆ ವೇಳೆ ಮತ್ತೊಂದು ಶವ ಸಿಕ್ಕಿದೆ. ಮೃತರಾದ ಹನ್ನೊಂದು ಜನರಲ್ಲಿ ಈವರೆಗೆ ಒಟ್ಟು 8 ಮೃತದೇಹಗಳು ಪತ್ತೆಯಾಗಿವೆ. ಕಾರ್ಯಾಚರಣೆಗೆ ಆಧುನಿಕ ತಂತ್ರಜ್ಞಾನದ ಮೊರೆಹೋಗಿರುವ ಜಿಲ್ಲಾಡಳಿತ ಇಸ್ರೋ ಜೊತೆಗೆ ಯೋಧರ ನೆರವು ಪಡೆದಿದೆ.

    ಒಂದೆಡೆ ಬಿಟ್ಟು ಬಿಡದ ಮಳೆ, ಮತ್ತೊಂದೆಡೆ ಪದೇ ಪದೇ ನೆಲಕ್ಕುರುಳುತ್ತಿರುವ ಗುಡ್ಡದ ಮಣ್ಣು. ಇದರ ನಡುವೆ ಜೀವ ಪಣಕ್ಕಿಟ್ಟು ಕಾರ್ಯಾಚರಣೆ ಮಾಡುತ್ತಿದೆ ರಕ್ಷಣಾ ತಂಡ. ಈಗ ಸಣ್ಣಿ ಹನುಮಂತ ಗೌಡ (67) ಮಹಿಳೆ ಶವ ಸಿಕ್ಕಿದೆ. ಘಟನೆ ನಡೆದ 8 ದಿನದ ಬಳಿಕ ಶವ ಪತ್ತೆಯಾಗಿದೆ. ಇನ್ನೂ ಮೂವರಿಗೆ ಶೋಧ ಕಾರ್ಯ ಮುಂದುವರಿದಿದೆ.

    ಮಣ್ಣಿನ ಕುಸಿತದಿಂದ ನದಿಯಲ್ಲಿ ತೇಲಿಹೋದ ಗಂಗೆಕೊಳ್ಳದ ಲೋಕೇಶ್ ನಾಯ್ಕ, ಶಿರೂರಿನ ಜಗನ್ನಾಥ ಜಟ್ಟಿ, ಉಳವರೆ ಗ್ರಾಮದ ಸಣ್ಣಿ ಹನುಮಂತಗೌಡ, ಕೇರಳ ಮೂಲದ ಅರ್ಜುನ್ ಶವ ಪತ್ತೆಯಾಗಬೇಕಿದೆ. ಶಂಕಿತ ಸ್ಥಳದಲ್ಲಿ ಶೋಧ ಕಾರ್ಯ ಮಾಡಿದರೂ ಟ್ರಕ್, ಟ್ಯಾಂಕರ್‌ಗಳು ಮಾತ್ರ ಪತ್ತೆಯಾಗಿಲ್ಲ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಆರ್ಮಿ ಕಮಾಂಡೋಗಳ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.

    ಗುಡ್ಡದ ಮಣ್ಣು ತೆರವಿಗೆ ಅಬ್ಬರದ ಅಡ್ಡಿ ಉಂಟು ಮಾಡಿದರೆ, ಮಳೆಯಿಂದ ಗುಡ್ಡದ ಭಾಗದಿಂದ ಬರುತ್ತಿರುವ ನೀರು ದೊಡ್ಡ ಕಂದಕವನ್ನೇ ಸೃಷ್ಟಿ ಮಾಡಿದೆ. ಇದರ ಜೊತೆಗೆ ಈ ಭಾಗದ ಮಣ್ಣನ್ನು ಪರೀಕ್ಷೆ ಮಾಡಿದ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಭೂ ವಿಜ್ಞಾನಿಗಳ ತಂಡ ಮತ್ತೆ ಈ ಭಾಗದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ವರದಿ ನೀಡಿದೆ. ಹೀಗಾಗಿ ಕಾರ್ಯಾಚರಣೆ ಮಾಡುವುದು ಸಹ ದೊಡ್ಡ ತೊಡಕಾಗಿದ್ದು, ಸಾರ್ವಜನಿಕರಿಗೆ ಮಣ್ಣು ತೆರವಾದ ರಸ್ತೆಯಲ್ಲಿ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

    ಜುಲೈ 16ರ ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತವಾಯಿತು. ಈ ದುರಂತದಲ್ಲಿ 11 ಮಂದಿ ಬಲಿಯಾಗಿದ್ದಾರೆ. ಅವರಲ್ಲಿ ಈವರೆಗೆ 8 ಮೃತದೇಹಗಳು ಪತ್ತೆಯಾಗಿವೆ. ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply