LATEST NEWS
ಶಿರೂರು – ದೋಣಿ ದುರಂತಕ್ಕೆ ಇಬ್ಬರು ಮೀನುಗಾರರ ಬಲಿ
ಶಿರೂರು ಡಿಸೆಂಬರ್ 18 : ಮೀನುಗಾರಿಕೆ ಮುಗಿಸಿ ವಾಪಾಸ್ ಬರುತ್ತಿದ್ದ ವೇಳೆ ದೋಣಿ ಮುಗುಚಿ ಇಬ್ಬರು ಮೀನುಗಾರರು ಸಾವನಪ್ಪಿದ ಘಟನೆ ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ. ಮೃತರನ್ನು ಹಡವಿನಕೋಣೆ ಶಿರೂರಿನ ನನ್ನು ಅಬ್ಸುಲ್ ಸತ್ತರ್ (45 ) ಹಾಗೂ ಕುದ್ವಾಯಿ ರೋಡ್, ಭಟ್ಕಳ ನಿವಾಸಿ ಮಿಸ್ಬಾ ಯೂಸುಫ್ (48) ಎಂದು ಗುರುತಿಸಲಾಗಿದೆ.
ಶಿರೂರು ಕಳುಹಿತ್ಲುವಿನಿಂದ ಮೀನುಗಾರಿಕೆ ತೆರಳಿದ್ದ ನುಮೈರಾ ಅಂಜುಮ್ ಎಂಬ ಹೆಸರಿನ ದೋಣಿಯಲ್ಲಿ 3 ಜನ ಮೀನುಗಾರರಿದ್ದರು. ಸೋಮವಾರ ಮೀನುಗಾರಿಕೆ ನಡೆಸಿ ವಾಪಾಸ್ಸು ಬರುವಾಗ ಮುಂಜಾನೆ 1.30 ಗಂಟೆ ವೇಳೆಗೆ ಶಿರೂರು ಕಳುಹಿತ್ಲು ಅಳಿವೆ ಸಮೀಪ ಅರಬ್ಬೀ ಸಮುದ್ರದಲ್ಲಿ ದೋಣಿ ಮಗುಚಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ದೋಣಿಯಲ್ಲಿದ್ದ ಮತ್ತೋರ್ವ ಬುಡ್ಡು ಮುಖ್ತಾರ್ ಹಡವಿನಕೋಣೆ ಇವರನ್ನು ಇನ್ನೊಂದು ದೋಣಿಯಲ್ಲಿದ್ದ ಮಾಮ್ಸು ಯಾಕೂಬ್ ರವರು ರಕ್ಷಣೆ ಮಾಡಿದ್ದಾರೆ.
ಕರಾವಳಿ ಕಾವಲು ಪಡೆ ಹಾಗೂ ಆರಕ್ಷಕ ಸಿಬಂಧಿಗಳು ಆಗಮಿಸಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮೀನುಗಾರರಿಗೆ ಪರಿಹಾರ ಘೋಷಣೆ:
ಬೈಂದೂರು ತಾಲೂಕಿನ ಶಿರೂರು ಸಮೀಪ ಅರಬ್ಬಿ ಸಮುದ್ರದಲ್ಲಿ ದೋಣಿ ಮಗುಚಿ ಇಬ್ಬರು ಮೀನುಗಾರರು ಮೃತಪಟ್ಟಿರುವುದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಹೊಸದಿಲ್ಲಿ ಪ್ರವಾಸದಲ್ಲಿರುವ ಸಚಿವರು, ಘಟನೆ ಕುರಿತಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಮೃತರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳುವಂತೆ ಮತ್ತು ಆದಷ್ಟು ಬೇಗ ಸೂಕ್ತ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.