Connect with us

    DAKSHINA KANNADA

    ಶಿರೂರು ದುರಂತ, 2 ತಿಂಗಳ ಬಳಿಕ ಪತ್ತೆಯಾದ ಅರ್ಜುನನ ಮೃತ ದೇಹ,ಜನಸ್ತೋಮದ ಕಣ್ಣೀರ ವಿದಾಯದೊಂದಿಗೆ ತವರೂರಲ್ಲಿ ಅಂತ್ಯಸಂಸ್ಕಾರ..!

    ಕೋಝಿಕ್ಕೋಡ್‌ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ್ದ ಗುಡ್ಡ ಕುಸಿತ ದುರಂತದಲ್ಲಿ ಕಣ್ಣರೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನನ ಶವ 2 ತಿಂಗಳ ಬಳಿಕ ಸಿಕ್ಕಿದ್ದು ಅರ್ಜುನನ ಹುಟ್ಟೂರಾದ ಕೋಝೀಕ್ಕೋಡ್‌ನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

    ಕಳೆದ ಜುಲೈ 16ರಂದು ಶಿರೂರು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿ ಎರಡು ತಿಂಗಳ ಬಳಿಕ  ಮೊದಲಿಗೆ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಅರ್ಜುನನ ಸುಳಿವನ್ನು ಪತ್ತೆ ಹಚ್ಚಿತ್ತು. ಬಳಿಕ ಶವವನ್ನು ಮೇಲಕ್ಕೆತ್ತಿ ಡಿಎನ್‌ಎ ಪರೀಕ್ಷೆ ಮಾಡಿಸಿ ಶವ ಅರ್ಜುನ್‌ನದ್ದೇ ಎಂದು ದೃಢೀಕರಿಸಿದ ಬಳಿಕ ಉತ್ತರ ಕನ್ನಡ ಜಿಲ್ಲಾಡಳಿತವು ಶವವನ್ನು ಪೊಲೀಸ್‌ ಸೂಕ್ತ ಬೆಂಗಾವಲಿನೊಂದಿಗೆ ಕೇರಳದ ಕೋಝಿಕ್ಕೂಡ್‌ನ ಅರ್ಜುನ್‌ನ ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು.

    ಬಳಿಕ ಚಾಲಕ ಶಂಶುದ್ದೀನ್ ಅವರ ಜನತಾ ಆ್ಯಂಬುಲೆನ್ಸ್‌ ಮೂಲಕ ಶುಕ್ರವಾರ ತಡರಾತ್ರಿ ಮೃತದೇಹವನ್ನು ಕಳುಹಿಸಿಕೊಡಲಾಗಿತ್ತು. ಈ ವೇಳೆ ಶೋಧ ಕಾರ್ಯಾಚರಣೆಯ ಮೇಲುಸ್ತುವಾರಿ ನೋಡಿಕೊಂಡಿದ್ದ ಕಾರವಾರ ಶಾಸಕ ಸತೀಶ್ ಸೈಲ್, ಸಾಮಾಜಿಕ ಕಾರ್ಯಕರ್ತ, ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಕೂಡ ಜೊತೆಗೆ ತೆರಳಿತ್ತು.

    ಬೆಳಗ್ಗೆ ಕೋಝಿಕ್ಕೋಡ್‌ನ ಕನ್ನಡಿಕ್ಕಲ್‌ನಲ್ಲಿರುವ ಅರ್ಜುನ್ ಅವರ ಮನೆಗೆ ಮೃತದೇಹ ತಲುಪಿದ್ದು ಈ ಸುದ್ದಿ ತಿಳಿಯುತ್ತಿದ್ದಂತೆಯೇ ಭಾರೀ ಜನಸ್ತೋಮ ನೆರೆದಿತ್ತು. ಬಂದಿದ್ದ ಅನೇಕರಲ್ಲಿ ಅರ್ಜುನ್ ಅವರು ಪರಿಚಯ ಇಲ್ಲದಿದ್ದರೂ ಅವರ ಮೃತದೇಹದ ಮುಂದೆ ಕಣ್ಣೀರು ಸುರಿಸುತ್ತಾ ನಿಂತಿದ್ದ ದೃಶ್ಯ ಕಂಡುಬಂತು.

    ಬೆಳಿಗ್ಗೆ 11 ಗಂಟೆಯವರೆಗೆ ಸಾರ್ವಜನಿಕ ದರ್ಶನವನ್ನು ನಿಗದಿಪಡಿಸಲಾಗಿತ್ತು. ಆದಾಗ್ಯೂ, ಮತ್ತಷ್ಟು ಜನರು ಬಂದಿದ್ದರಿಂದ ಮಧ್ಯಾಹ್ನದ ವೇಳೆಗೆ ಅರ್ಜುನ್ ಅವರ ಸಹೋದರನ ನೇತೃತ್ವದಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಯಿತು. ಅರ್ಜುನ್ ಅವರ ಮಗ ಅಯಾನ್ ಅವರನ್ನು ಕೊನೆಯ ಕ್ಷಣದಲ್ಲಿ ಸ್ಥಳಕ್ಕೆ ಕರೆತರಲಾಯಿತು. ಅಪ್ಪನನ್ನು ನೆನೆದು ಕಣ್ಣೀರಿಡುತ್ತಿದ್ದ ಮಗ, ಪತಿಯನ್ನು ನೆನೆದು ಪತ್ನಿ, ಮಗನನ್ನು ನೆನೆದು ಅರ್ಜುನ್ ಪೋಷಕರು ಕಣ್ಣೀರಿಡುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣುಗಳನ್ನು ತೇವಗೊಳಿಸಿತು.

    ಅಂತಿಮವಾಗಿ ಅರ್ಜುನ್ ಮೃತದೇಹವನನ್ನು ಅವರು ನಿರ್ಮಿಸಲು ಬಯಸಿದ್ದ ಮನೆಯ ಬಳಿಯಲ್ಲಿಯೇ ದಹನ ಮಾಡಲಾಯಿತು. ಕೇರಳದ ಸಚಿವರಾದ ಎ.ಕೆ.ಶಶೀಂದ್ರನ್, ಕೆ.ಬಿ.ಗಣೇಶ್ ಕುಮಾರ್, ಸಂಸದ ಎಂ.ಕೆ.ರಾಘವನ್, ಕಾರವಾರ ಶಾಸಕ ಸತೀಶ್ ಸೈಲ್, ಈಶ್ವರ್ ಮಲ್ಪೆ, ಅರ್ಜುನ್ ಅವರ ಲಾರಿ ಮಾಲೀಕ ಮನಾಫ್ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

    ಕರ್ನಾಟಕ ಸರ್ಕಾರದಿಂದ ಅರ್ಜುನ್ ಕುಟುಂಬಕ್ಕೆ 5 ಲಕ್ಷ ಪರಿಹಾರ

    ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದಲ್ಲಿ ಮೃತನಾದ ಕೇರಳದ ಲಾರಿ ಚಾಲಕ ಅರ್ಜುನ್ ಇವರ ಕುಟುಂಬಕ್ಕೆ ಕರ್ನಾಟಕ ರಾಜ್ಯ ಸರ್ಕಾರ ವಿಪತ್ತು ನಿಧಿಯಿಂದ 5 ಲಕ್ಷ ರೂ ಪರಿಹಾರವನ್ನು ಉತ್ತರ ಕನ್ನಡ ಜಿಲ್ಲಾಡಳಿತದಿಂದ ಮಂಜೂರು ಮಾಡಲಾಗಿದೆ.

     

    ಶವಪೆಟ್ಟಿಗೆಯಲ್ಲಿ ರವಾನಿಸುವ ಬದಲು ಬಟ್ಟೆಯಲ್ಲಿ ಬಿಡಿಬಿಡಿಯಾಗಿ ಕಟ್ಟಿ ಕಳುಹಿಸಿಕೊಟ್ಟ ಉತ್ತರ ಕನ್ನಡ ಜಿಲ್ಲಾಡಳಿತ..!!??

    ಉಡುಪಿ: ಶುಕ್ರವಾರ ತಡ ರಾತ್ರಿ   ಅರ್ಜುನ್ ಮೃತದೇಹ ಉಡುಪಿಗೆ ಆಗಮಿಸಿತ್ತು. ಉತ್ತರ ಕನ್ನಡ ಜಿಲ್ಲಾಡಳಿತ ಮೃತದೇಹವನ್ನು ಶವಪೆಟ್ಟಿಗೆಯಲ್ಲಿ ರವಾನಿಸುವ ಬದಲು ಬಟ್ಟೆಯಲ್ಲಿ ಬಿಡಿಬಿಡಿಯಾಗಿ ಕಟ್ಟಿ ಕಳುಹಿಸಿಕೊಟ್ಟಿತ್ತು. ಸೂಕ್ತ ವ್ಯವಸ್ಥೆ ಕಲ್ಪಿಸದೆ ಮೃತದೇಹ ರವಾನಿಸುವ ಮೂಲಕ‌ ಉತ್ತರ ಕನ್ನಡ ಜಿಲ್ಲಾಡಳಿತದ ನಿರ್ಲಕ್ಷ್ಯ ವಹಿಸಿದೆಯೇ ಎಂಬ ಆರೋಪ ಕೇಳಿಬಂದಿದೆ. ಉಡುಪಿಯ ಕೇರಳ ಸಮಾಜ ಬಾಂಧವರು ಮತ್ತು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ಈಶ್ವರ್ ಮಲ್ಪೆ ಅವರು ಮೃತದೇಹ ಕಳುಹಿಸಿಕೊಡಲು ಫ್ರೀಜರ್ ಪೆಟ್ಟಿಗೆಯ ವ್ಯವಸ್ಥೆಯನ್ನು ಮಾಡಿಕೊಟ್ಟರು. ಬಳಿಕ ಅರ್ಜುನ್ ತವರೂರು ಕ್ಯಾಲಿಕಟ್ ಗೆ ಮೃತದೇಹ ರವಾನೆ ಮಾಡಲಾಯಿತು. ನಗರದ ಚಿತ್ತರಂಜನ್ ಸರ್ಕಲ್ ನಲ್ಲಿ ಸೇರಿದ್ದ ಜನಸ್ತೋಮ ಮೃತ ಅರ್ಜುನ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು.

     

    Share Information
    Advertisement
    Click to comment

    You must be logged in to post a comment Login

    Leave a Reply