DAKSHINA KANNADA
ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸವಾರರೇ ಎಚ್ಚರ ಎಚ್ಚರ….!!
ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸವಾರರೇ ಎಚ್ಚರ ಎಚ್ಚರ….!!
ಮಂಗಳೂರು, ಜುಲೈ 14 :ಕಳೆದ ಆರು ತಿಂಗಳಿನಿಂದ ವಾಹನ ಸಂಚಾರ ಸಂಪೂರ್ಣ ನಿಷೇಧಗೊಂಡಿದ್ದ ಶಿರಾಢಿಘಾಟ್ ನಾಳೆಯಿಂದ ಮತ್ತೆ ವಾಹನಗಳಿಂದ ಬ್ಯುಸಿಯಾಗಲಿದೆ.
ಘಾಟ್ ರಸ್ತೆಯ ಎರಡನೇ ಹಂತದ ಕಾಂಕ್ರೀಟೀಕರಣ ಕಾಮಗಾರಿಯು ಅಂತಿಮ ಹಂತಕ್ಕೆ ತಲುಪಿದ ಹಿನ್ನಲೆಯಲ್ಲಿ ನಾಳೆಯಿಂದ ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಆದರೆ ಅಪಾಯಕಾರಿ ಸ್ಥಳಗಳಲ್ಲಿ ರಸ್ತೆ ಬದಿಯಿರುವ ಇಳಿಜಾರು ಪ್ರದೇಶಗಳಿಗೆ ಅಡ್ಡಲಾಗಿ ಕಟ್ಟಿದ ಒಂದೊಂದೇ ತಡೆಗೋಡೆಗಳು ಇದೀಗ ಜಾರಿ ಕೆಂಪುಹೊಳೆಯನ್ನು ಸೇರುತ್ತಿವೆ.
ಸುರಕ್ಷತೆಗೆ ಒತ್ತು ನೀಡದೆ ತರಾತುರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿದ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಎಷ್ಟು ಸುರಕ್ಷಿತ ಎನ್ನುವ ಗೊಂದಲ ಕಾಡತೊಡಗಿದೆ.
ಪ್ರತಿ ಮಳೆಗಾಲದ ಸಂದರ್ಭದಲ್ಲೂ ಪ್ರಯಾಣಿಕರಿಗೆ ಭಾರೀ ತೊಂದರೆಯನ್ನು ಕೊಡುತ್ತಿದ್ದ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟೀಕರಣ ಮಾಡುವ ಕಾಮಗಾರಿ ಇದೀಗ ಮುಗಿಯುವ ಹಂತಕ್ಕೆ ತಲುಪಿದೆ.
ಶಿರಾಡಿಘಾಟ್ ನ 26 ಕಿಲೋಮೀಟರ್ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟೀಕರಣ ಗೊಳಿಸುವ ನಿಟ್ಟಿನಲ್ಲಿ ಹೆದ್ದಾರಿ ಇಲಾಖೆಯು ಸುಮಾರು 183 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಹಮ್ಮಿಕೊಂಡಿತ್ತು.
ಮೊದಲ ಹಂತದಲ್ಲಿ ಕೆಂಪುಹೊಳೆಯಿಂದ ಮಾರನಹಳ್ಳಿವರೆಗಿನ 13 ಕಿಲೋಮೀಟರ್ ರಸ್ತೆಯ ಕಾಮಗಾರಿಯನ್ನು ಈಗಾಗಲೇ ಮುಗಿಸಲಾಗಿದ್ದು, ಅಡ್ಡಹೊಳೆಯಿಂದ ಕೆಂಪುಹೊಳೆವರೆಗಿನ 13 ಕಿಲೋಮೀಟರ್ ರಸ್ತೆಯ ಕಾಮಗಾರಿ ಇದೀಗ ಮುಗಿಯುವ ಹಂತದಲ್ಲಿದೆ. ಕಾಮಗಾರಿ ಆರಂಭಗೊಂಡು 6 ತಿಂಗಳು ಕಳೆದಿದ್ದು, ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ನಿಶೇಧ ಹೇರಲಾಗಿತ್ತು.
ಇದೀಗ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುವ ಹಿನ್ನಲೆಯಲ್ಲಿ ಜುಲೈ 15 ರಿಂದಲೇ ಶಿರಾಡಿಘಾಟ್ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧತೆಯನ್ನು ನಡೆಸಲಾಗಿದೆ.
ಶಿರಾಡಿಘಾಟ್ ರಸ್ತೆಯು ಅಪಾಯಕಾರಿ ರಸ್ತೆಗಳಲ್ಲಿ ಒಂದಾಗಿದ್ದು, ಇಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತನ್ನೂ ನೀಡಲಾಗುತ್ತದೆ. ರಸ್ತೆಯ ಎರಡೂ ಭಾಗವೂ ಸಂಪೂರ್ಣ ಇಳಿಜಾರು ಪ್ರದೇಶವಾಗಿದ್ದು, ಈ ಕಾರಣಕ್ಕಾಗಿ ಎರಡೂ ಭಾಗಕ್ಕೂ ತಡೆಗೋಡೆಗಳನ್ನು ನಿರ್ಮಿಸಲು ನಿರ್ಧಾರಕ್ಕೂ ಬರಲಾಗಿದೆ.
ಆದರೆ ಈ ತಡೆಗೋಡೆಗಳು ಕೆಲವು ಕಡೆಗಳಲ್ಲಿ ಇನ್ನಷ್ಟೇ ಆಗಬೇಕಿದ್ದು, ಇನ್ನು ಕೆಲವು ಕಡೆಗಳಲ್ಲಿ ಕಟ್ಟಿದ ತಡೆಗೋಡೆ ಕುಸಿದು ಬಿದ್ದು, ರಸ್ತೆಯ ಕೆಳಭಾಗದಲ್ಲಿ ತುಂಬಿ ಹರಿಯುತ್ತಿರುವ ಕೆಂಪುಹೊಳೆಯನ್ನು ಸೇರುತ್ತಿದೆ.
ಅಲ್ಲದೆ ಕಾಂಕ್ರೀಟ್ ರಸ್ತೆಯು ನೆಲದ ಮಟ್ಟದಿಂದ 1 ಫೀಟ್ ನಷ್ಟು ಮೇಲ್ಭಾಗದಲ್ಲಿದ್ದು, ರಸ್ತೆಯನ್ನು ನೆಲಕ್ಕೆ ಸರಿಸಮವಾಗಿ ಮಾಡಲು ಇಕ್ಕೆಲಗಳಲ್ಲೂ ಮಣ್ಣನ್ನು ಹಾಕುವ ಕಾಮಗಾರಿಯೂ ಪೂರ್ಣಗೊಂಡಿಲ್ಲ.
ಇದರಿಂದಾಗಿ ಕೆಲವು ಕಡೆಗಳಲ್ಲಿ ವಾಹನಗಳು ಕೊಂಚ ಆಯ ತಪ್ಪಿದರೂ ಪಾತಾಳಕ್ಕೆ ಬೀಳ ಬೇಕಾದಂತಹ ಸ್ಥಿತಿಯಿದೆ.
ಸಂಪೂರ್ಣ ಸುರಕ್ಷತಾ ಕ್ರಮವನ್ನು ಕೈಗೊಳ್ಳುವ ಮೊದಲೇ ಘಾಟ್ ರಸ್ತೆಯಲ್ಲಿ ವಾಹನಗಳನ್ನು ಬಿಟ್ಟಲ್ಲಿ ಅನಾಹುತವಾಗುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ.
ರಸ್ತೆಯ ಕಾಮಗಾರಿಯಿಂದ ಸುಮಾರು 6 ತಿಂಗಳು ಕಾಲ ತಮ್ಮ ವ್ಯವಹಾರಗಳನ್ನು ನಿಲ್ಲಿಸಿದ್ದ ಸ್ಥಳೀಯ ನಿವಾಸಿಗಳೂ ರಸ್ತೆಯ ಸುರಕ್ಷತೆಯ ಬಗ್ಗೆ ಇದೀಗ ಚಿಂತಿತರಾಗಿದ್ದಾರೆ.
ರಸ್ತೆಯನ್ನು ವಾಹನ ಸಂಚಾರಕ್ಕೆ ಬಿಟ್ಟುಕೊಡಬೇಕೆನ್ನುವ ಸ್ಥಳೀಯರ ಒತ್ತಡದಿಂದಾಗಿ ಕಾಮಗಾರಿಯನ್ನು ಸಂಪೂರ್ಣ ಮುಗಿಸುವ ಮೊದಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳಲಾಗುತ್ತಿದೆಯೋ ಎನ್ನುವ ಆರೋಪಗಳೂ ಕೇಳಿ ಬರುತ್ತಿದೆ.