DAKSHINA KANNADA
ಶಿರಾಢಿಘಾಟ್ ನಲ್ಲಿ ಕೆಸರುಯುಕ್ತ ನೀರು ರಸ್ತೆಗೆ ಹರಿಯುತ್ತಿದೆ – ಜಿಲ್ಲಾಧಿಕಾರಿ ಮುಲ್ಲೈಮುಗಿಲನ್

ಪುತ್ತೂರು ಜುಲೈ 31: ಭಾರೀ ಮಳೆಯಿಂದ ಪ್ರವಾಹಕ್ಕೆ ತುತ್ತಾದ ಪ್ರದೇಶಗಳಿಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಕ್ಷಿಣಕನ್ನಡ ಜಿಲ್ಲೆ. ಬಂಟ್ವಾಳ,ಉಪ್ಪಿನಂಗಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು ನಿನ್ನೆ ಸುರಿದ ಭಾರಿ ಮಳೆಗೆ ಹಲವು ಕಡೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಈಗಾಗಲೇ ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳನ್ನು ಕಳುಹಿಸಲಾಗಿದೆ. ನಷ್ಟದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಹಾನಿಗೊಳಗಾದವರಿಗೆ ತಕ್ಷಣವೇ ಪರಿಹಾರವನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಎನ್.ಡಿ.ಆರ್.ಎಫ್ ಮೂಲಕ ಪರಿಹಾರವನ್ನು ಒದಗಿಸಲಾಗುತ್ತದೆ. ಉಪ್ಪಿನಂಗಡಿ ನೇತ್ರಾವತಿ ನದಿ ತಟದಲ್ಲಿ ಹೋಮ್ ಗಾರ್ಡ್ ಗಳನ್ನು ನಿಯೋಜಿಸಲಾಗಿದೆ. ಎನ್.ಡಿ.ಆರ್.ಎಫ್ ತಂಡವನ್ನು ಸಮೀಪದಲ್ಲೇ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಎಂದರು.

ಇನ್ನು ಶಿರಾಢಿಘಾಟ್ ನಲ್ಲಿ ನಿರಂತರ ಗುಡ್ಡ ಕುಸಿತ ಆಗುತ್ತಿದೆ. ಕೆಸರುಯುಕ್ತ ನೀರು ರಸ್ತೆಗೆ ನಿರಂತರ ಹರಿಯುತ್ತಿದೆ. ಕೆಸರು ತೆಗೆದಂತೆ ಮತ್ತೆ ಕೆಸರು ಬರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದರೂ ರಸ್ತೆಯನ್ನು ಬಂದ್ ಮಾಡದೆ ವಾಹನಗಳನ್ನು ಬಿಡಲಾಗುತ್ತಿದೆ ಎಂದರು. ಮಳೆ ಕಡಿಮೆಯಾಗದೆ ಪೂರ್ಣ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ, ಮಳೆ ಕಡಿಮೆಯಾದ ಬಳಿಕ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು. ಚಾರ್ಮಾಡಿ ಘಾಟ್ ನಲ್ಲಿ ಘನ ವಾಹನಗಳ ಸಂಚಾರವನ್ನು ನಿಶೇಧಿಸಲಾಗಿದೆ. ಲಘು ವಾಹನಗಳ ಸಂಚಾರಕ್ಕೆ ಅಲ್ಲಿ ಅವಕಾಶ ಕಲ್ಪಿಸಲಾಗಿದೆ. ಮಾಣಿ-ಮೈಸೂರು ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದರು.
ವಯನಾಡಿನಲ್ಲಿ ಜಿಲ್ಲೆಗೆ ಸಂಬಂಧಪಟ್ಟವರಿದ್ದರೆ ಅವರ ಮಾಹಿತಿಯನ್ನು ಜಿಲ್ಲಾ ಕಛೇರಿಗೆ ನೀಡಲು ಸೂಚಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿಯ ವ್ಯವಸ್ಥೆಯೂ ಇದೆ. ಈವರೆಗೆ ಜಿಲ್ಲೆಯಿಂದ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ.