DAKSHINA KANNADA
ಶಿರಾಡಿ ಘಾಟ್ ರಸ್ತೆ ಮಧ್ಯೆ ಉರುಳಿದ ಬೃಹತ್ ಗಾತ್ರದ ಬಂಡೆ
ಪುತ್ತೂರು ಜುಲೈ 27: ಕರಾವಳಿಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಮಳೆಯ ಅಬ್ಬರ ಮತ್ತೆ ಮಂಗಳೂರು ಬೆಂಗಳೂರು ನಡುವಿನ ಸಂಪರ್ಕ ರಸ್ತೆಗಳನ್ನು ಬಂದ್ ಮಾಡುವ ಸಾಧ್ಯತೆ ಇದೆ. ಈಗಾಗಲೇ ಎಡಕುಮೇರಿ ಬಳಿ ರೈಲ್ವೆ ಹಳಿಗಳ ಕಳೆಗಿನ ಭೂಕುಸಿತದಿಂದಾಗಿ ರೈಲ್ವೆ ಸಂಪರ್ಕ ಸ್ಥಗಿತಗೊಂಡಿದ್ದು, ಇದೀಗ ಶಿರಾಡಿ ಘಾಟ್ ನಲ್ಲೂ ಭೂಕುಸಿತದ ವರದಿಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಢಿಘಾಟ್ ನ ಕೆಂಪುಹೊಳೆ ಎಂಬಲ್ಲಿ ಹೆದ್ದಾರಿಗೆ ಬೃಹತ್ ಗಾತ್ರದ ಬಂಡೆ ಉರುಳಿ ಬಿದ್ದಿದೆ. ರಸ್ತೆ ಮಧ್ಯೆ ಬಂಡೆ ಬಿದ್ದಿದ್ದು, ವಾಹನಗಳು ವಿರಳ ಸಂಖ್ಯೆಯಲ್ಲಿರುವ ಕಾರಣ ಯಾವುದೇ ಅಪಾಯವಾಗಿಲ್ಲ. ಇದೀಗ ಹೆದ್ದಾರಿ ಇಲಾಖೆ ಬಂಡೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಈ ನಡುವೆ ಶಿರಾಢಿಘಾಟ್ ಪ್ರದೇಶದಲ್ಲಿ ಮತ್ತೆ ಭೂಕುಸಿತ ಹಿನ್ನಲೆ, ಘನ ವಾಹನಗಳ ಓಡಾಟಕ್ಕೆ ತಡೆಯೊಡ್ಡಲಾಗಿದೆ. ಗುಂಡ್ಯಾ ಚೆಕ್ ಪೋಸ್ಟ್ ಬಳಿ ಘನ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸುತ್ತಿದ್ದಾರೆ. ಮಳೆ ಮತ್ತೆ ಮುಂದುವರೆದರೆ ಮಂಗಳೂರಿನಿಂದ ಬೆಂಗಳೂರು ಸಂಪರ್ಕಿಸುವ ರಸ್ತೆ ಮತ್ತೆ ಬಂದ್ ಆಗುವ ಸಾಧ್ಯತೆ ಇದೆ.