LATEST NEWS
ಅಗಸ್ಟ್ 2 ರಿಂದ ಶಿರಾಡಿ ಘಾಟ್ ಎಲ್ಲಾ ವಾಹನ ಸಂಚಾರಕ್ಕೆ ಮುಕ್ತ

ಅಗಸ್ಟ್ 2 ರಿಂದ ಶಿರಾಡಿ ಘಾಟ್ ಎಲ್ಲಾ ವಾಹನ ಸಂಚಾರಕ್ಕೆ ಮುಕ್ತ
ಮಂಗಳೂರು ಆಗಸ್ಟ್ 1 : ಶಿರಾಡಿ ಘಾಟ್ ರಸ್ತೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿರುವುದರಿಂದ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ. ಆಗಸ್ಟ್ 2 ರಿಂದ ಶಿರಾಡಿ ಘಾಟ್‍ನಲ್ಲಿ ಭಾರೀ ವಾಹನಗಳು ಸೇರಿದಂತೆ ಎಲ್ಲಾ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಆದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಶಿರಾಡಿಘಾಟ್ ಆಗಿದೆ. ವಾಹನ ಸಂಚಾರ ಹಾಗೂ ಈ ಭಾಗದಲ್ಲಿ ಸುರಿಯುವ ಭಾರಿ ಮಳೆಗೆ ಈ ರಸ್ತೆ ಯಾವಾಗಲೂ ಹೊಂಡ ಗುಂಡಿಗಳಿಂದ ತುಂಬಿರುತ್ತಿತ್ತು. ಈ ಹಿನ್ನಲೆಯಲ್ಲಿ ಶಿರಾಢಿ ಘಾಟ್ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲು ತೀರ್ಮಾನಿಸಲಾಗಿತ್ತು. 2015ರಲ್ಲಿ ಮೊದಲ ಹಂತದಲ್ಲಿ 13 ಕಿ.ಮೀ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗಿತ್ತು. 2ನೇ ಹಂತದಲ್ಲಿ 12.38 ಕಿ.ಮೀ ಉದ್ದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯನ್ನು 2018ರ ಜನವರಿ 20 ರಿಂದ ಕೈಗೆತ್ತಿಕೊಳ್ಳಲಾಗಿತ್ತು.

ಅಂದಿನಿಂದ ಈ ಮಾರ್ಗದ ಸಂಚಾರ ಬಂದ್ ಆಗಿ ಕರಾವಳಿ ಭಾಗಕ್ಕೆ ಹೋಗುವವರು ಸುತ್ತಿ ಬಳಸಿ ಪ್ರಯಾಣ ಮಾಡಬೇಕಿತ್ತು. ಕೊನೆಗೂ ಮಳೆಯ ಅಡೆತಡೆಗಳ ನಡುವೆಯೂ ಸುಮಾರು ರೂಪಾಯಿ 74 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡ ಹಿನ್ನಲೆಯಲ್ಲಿ 6 ತಿಂಗಳ ಬಳಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಇದೀಗ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆ ಪಕ್ಕದ ಇಳಿಜಾರು ಕಣಿವೆಯ ತಡೆಗೋಡೆ ಹಾಗೂ ರಸ್ತೆ ಬಾಹೂ ಕಾಮಗಾರಿ ಕೂಡ ಸಂಪೂರ್ಣವಾಗಿದೆ. ಈ ಹಿನ್ನಲೆಯಲ್ಲಿ ಉದ್ಘಾಟನೆಯ ನಂತರ ಭಾರಿ ವಾಹನಗಳಿಗೆ ಸಂಚಾರಕ್ಕೆ ನಿರ್ಬಂಧಿಸಿದ್ದ ನಿಷೇಧವನ್ನು ಈಗ ಸಂಪೂರ್ಣ ತೆಗೆದು ಹಾಕಲಾಗಿದ್ದು, ಅಗಸ್ಟ್ 2 ರಿಂದ ಎಲ್ಲಾ ರೀತಿಯ ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.