LATEST NEWS
ಬೆಂಗಳೂರು ಪಿಲಿಕುಳ ಬಳಿಕ ಇದೀಗ ಶಿವಮೊಗ್ಗ ಕಂಬಳದ ಮೇಲೆ ಪೇಟಾ ಕಣ್ಣು…!!

ಮಂಗಳೂರು ಫೆಬ್ರವರಿ 28: ಬೆಂಗಳೂರು ಮತ್ತು ಪಿಲಿಕುಳುದಲ್ಲಿ ಕಂಬಳ ನಡೆಯದಂತೆ ಅಡ್ಡಗಾಲು ಹಾಕಿದ್ದ ಪೇಟಾ ಇದೀಗ ಮೊತ್ತ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ನಡೆಯಲಿರುವ ಕಂಬಳಕ್ಕೆ ಅಡ್ಡಗಾಲು ಹಾಕಲು ಮುಂದಾಗಿದೆ. ಏಪ್ರಿಲ್‌ನಲ್ಲಿ ಮಲೆನಾಡು ಶಿವಮೊಗ್ಗದಲ್ಲಿ ನಡೆಯಲಿರುವ ಕಂಬಳ ವಿರುದ್ಧವೂ ಹೈಕೋರ್ಟ್ ಮೆಟ್ಟಿಲೇರಿದೆ.
ಕಂಬಳದ ವಿರುದ್ದ ಪೇಟಾ ತನ್ನ ಕಾನೂನು ಹೋರಾಟ ಮುಂದುವರೆಸಿದೆ. ಬೆಂಗಳೂರು ಹಾಗೂ ಮಂಗಳೂರಿನ ಪಿಲಿಕುಳದಲ್ಲಿ ನಡೆಸಲು ಉದ್ದೇಶಿಸಿದ್ದ ಸರಕಾರಿ ಕಂಬಳವನ್ನು ನಿಲ್ಲಿಸಲು ಯಶಸ್ವಿಯಾಗಿದ್ದ ಪೇಟಾ ಇದೀಗ ಮಲೆನಾಡು ಶಿವಮೊಗ್ಗದಲ್ಲಿ ನಡೆಯಲಿರುವ ಕಂಬಳ ನಿಲ್ಲಿಸಿಲು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಶಿವಮೊಗ್ಗ ಕಂಬಳ ಏಪ್ರಿಲ್ 19 ಮತ್ತು 20ರಂದು ನಿಗದಿಯಾಗಿದೆ. ಇದರ ವಿರುದ್ಧವೂ ಹೈಕೋರ್ಟ್‌ಗೆ ಎರಡು ತಿಂಗಳ ಹಿಂದೆಯೇ ಪೇಟಾ ದೂರು ನೀಡಿದೆ.

ಕಂಬಳ ಜಾನಪದ ಕ್ರೀಡೆಯಾಗಿದ್ದು, ಅದನ್ನು ದ. ಕ ಹಾಗೂ ಉಡುಪಿ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ನಡೆಸಲು ಅವಕಾಶ ನೀಡಬಾರದು ಎಂಬ ತರ್ಕವನ್ನು ಮುಂದೊಡ್ಡಿದೆ. ಆದರೆ ಶಿವಮೊಗ್ಗ ಕಂಬಳ ಸಮಿತಿ ಅಧ್ಯಕ್ಷರಾದ ಅವಿಭಜಿತ ದ.ಕ.ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವ ಮುಚೂರು ಲೋಕೇಶ್ ಶೆಟ್ಟಿ ಅವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿ ಕಂಬಳ ನಡೆಸಲು ಅವಕಾಶ ನೀಡುವಂತೆ ಕೋರಿದ್ದಾರೆ.
ಶಿವಮೊಗ್ಗದಲ್ಲಿ ನಡೆಯುವ ಕಂಬಳದಲ್ಲಿ ಭಾಗವಹಿಸುವುದು ಅವಿಭಜಿತ ದ.ಕ. ಜಿಲ್ಲೆಯ ಕಂಬಳ ಯಜಮಾನರು, ಕೋಣಗಳು ಹಾಗೂ ಕೋಣ ಓಡಿಸುವವರು. ಹಾಗಾಗಿ ಇದರಲ್ಲಿ ಯಾವುದೇ ವ್ಯತ್ಯಾಸಗಳು ಇಲ್ಲ. ಹಾಗಾಗಿ ಪೇಟಾದ ತಡೆ ಬೇಡಿಕೆಯನ್ನು ನಿರಾಕರಿಸಿ ಕಂಬಳಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಸ್ವೀಕೃತವಾಗಿದೆ. ಶಿವಮೊಗ್ಗದಲ್ಲಿ ಕಂಬಳಕ್ಕೆ ಸಿದ್ದತೆಗಳು ಆರಂಭವಾಗಿದೆ. ಈ ನಡುವೆ ಇದೀಗ ಕೋರ್ಟ್ ನಲ್ಲಿ ಪೇಟಾ ರಿಟ್ ಅರ್ಜಿ ಸಲ್ಲಿಸಿದೆ. ಬೆಂಗಳೂರು ಹಾಗೂ ಪಿಲಿಕುಳದಂತೆ ಶಿವಮೊಗ್ಗ ಕಂಬಳಕ್ಕೂ ವಿಘ್ನ ತರಲಿದೆಯಾ ಕಾದು ನೋಡಬೇಕಿದೆ.