LATEST NEWS
ಪವಿತ್ರ ಹಜ್ ಯಾತ್ರೆಗೆ ಕಾಲ್ನಡಿಗೆಯಲ್ಲೇ ಹೊರಟ ಶಿಹಾಬ್- ಮಂಗಳೂರಿನಲ್ಲಿ ಸ್ವಾಗತ
ಉಳ್ಳಾಲ, ಜೂನ್ 10: ಮಲಪ್ಪುರಂನಿಂದ ಸುಮಾರು 8,600ಕ್ಕೂ ಅಧಿಕ ಕಿ.ಮೀ. ದೂರದಲ್ಲಿರುವ ಪವಿತ್ರ ಮಕ್ಕಾವನ್ನು 9 ತಿಂಗಳ ಅವಧಿಯ ಕಾಲ್ನಡಿಗೆಯಲ್ಲೇ ಕ್ರಮಿಸಿ ಪವಿತ್ರ ಹಜ್ ಯಾತ್ರೆಗೆ ಹೊರಡಲು ಸಂಕಲ್ಪ ಮಾಡಿರುವ ಮುಸ್ಲಿಂ ಯುವಕ ಶಿಹಾಬ್ ಚೊಟ್ಟೂರ್ ನಿನ್ನೆ ತಲಪಾಡಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಕೇರಳದ ಮಲಪ್ಪುರಂ ಜಿಲ್ಲೆಯ ಕನಿಪುರದಲ್ಲಿ ಸೂಪರ್ ಮಾರ್ಕೆಟ್ ನಡೆಸುತ್ತಿರುವ ಶಿಹಾಬ್ ಚೊಟ್ಟೂರ್ (30) ಹಜ್ ಯಾತ್ರೆಗೆ ಹೊರಟಿರುವ ಯುವಕ. ಇವರು ನಿನ್ನೆ ಸಂಜೆ 5.30ಕ್ಕೆ ತಲಪಾಡಿ ಗಡಿ ಮೂಲಕ ದ.ಕ.ಜಿಲ್ಲೆಗೆ ಪ್ರವೇಶಿಸಿದ್ದು, ನೂರಾರು ಮಂದಿ ಭವ್ಯ ಸ್ವಾಗತ ನೀಡಿದರು. ತಲಪಾಡಿ ಪ್ರವೇಶಿಸುತ್ತಲೇ ನೂರಾರು ಮಂದಿ ಬರಮಾಡಿಕೊಂಡರು.
ಗುರುವಾರ ಮಧ್ಯಾಹ್ನ ಕೇರಳದ ಹೊಸಂಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡ ಶಿಹಾಬ್ ಕೆಲವು ಹೊತ್ತು ವಿಶ್ರಾಂತಿ ಪಡೆದು ಬಳಿಕ ಯಾತ್ರೆ ಮುಂದುವರಿಸಿದರು. ಕೋಟೆಕಾರ್ ಸಮೀಪದ ಬೀರಿಯ ಮಸೀದಿಯಲ್ಲಿ ಮಗ್ರಿಬ್ ನಮಾಝ್ ನಿರ್ವಹಿಸಿದ ಶಿಹಾಬ್ ಅವರಿಗೆ ಸಾರ್ವಜನಿಕರು ಶುಭಕೋರಿದರು.
ಈ ಸಂದರ್ಭದಲ್ಲಿ ಭಾರೀ ಜನಜಂಗುಳಿ, ನೂಕು ನುಗ್ಗಲು ಉಂಟಾಗಿ ಶಿಹಾಬ್ ಅವರಿಗೆ ಸಾವಧಾನವಾಗಿ ನಡೆಯುವುದೇ ಕಷ್ಟವಾಯಿತು. ತಲಪಾಡಿಯಿಂದ ಬೀರಿವರೆಗೂ ಅವರನ್ನು ಸುತ್ತುವರೆದು ಹಿಂಬಾಲಿಸಿಕೊಂಡು ಬಂದ ಜನರ ಅತ್ಯುತ್ಸಾಹ ನೂಕಾಟ, ತಳ್ಳಾಟಕ್ಕೂ ಕಾರಣವಾಯಿತು. ಕೇರಳದ ಎಂಟು ದಿನಗಳಲ್ಲೂ ಶಿಹಾಬ್ ಜೊತೆ ಜನಜಂಗುಳಿಯೇ ಸೇರಿತ್ತು. ಸುರಿಯುವ ಮಳೆಗೆ ಕೊಡೆ ಹಿಡಿಯಲು ಸಾವಿರಾರು ಮಂದಿ ಸಾಥ್ ನೀಡುತ್ತಿದ್ದರು. ಪಾದಯಾತ್ರೆ ಮೂಲಕ ಹಜ್ ಯಾತ್ರೆಗೆ ಹೊರಡಬೇಕೆಂದು ಸುಮಾರು 8 ತಿಂಗಳಿಂದ ಸಿದ್ಧತೆ ಮಾಡಿಕೊಂಡ ಶಿಹಾಬ್‌ಗೆ ವಿದೇಶಾಂಗ ವ್ಯವಹಾರ ಸಚಿವಾಲಯದಿಂದ ಎಲ್ಲ ಅನುಮತಿ ಪಡೆದುಕೊಳ್ಳಲು ಕೇಂದ್ರ ಸಚಿವ ವಿ. ಮುರುಳೀಧರನ್ ಸಹಿತ ಹಲವರು ನೆರವಾಗಿದ್ದಾರೆ.
ಕೇರಳ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ್, ಹರಿಯಾಣ, ಪಂಜಾಬ್, ವಾಘಾ ಗಡಿ ಮೂಲಕ ಪಾಕಿಸ್ತಾನ, ಇರಾಕ್, ಇರಾನ್, ಕುವೈಟ್ ಮತ್ತು ಸೌದಿ ಅರೇಬಿಯಾ ತೆರಳುವ ಅವರು, ಆಯಾ ವಿವಿಧ ದೇಶಗಳ ಗಡಿ ದಾಟಲು ವೀಸಾ ಹಾಗೂ ರಾಯಭಾರ ಕಚೇರಿಗಳಿಂದ ಅನುಮತಿ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಈ ಯಾತ್ರೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಶಿಹಾಬ್ ‘ಒಟ್ಟು 8640ಕಿ,ಮೀ ಹಾದಿಯನ್ನು 280 ದಿನಗಳಲ್ಲಿ ತಲುಪುವುದು ನನ್ನ ಗುರಿ. ಪ್ರತಿದಿನ 25ಕಿ.ಮೀ ನಡೆಯುತ್ತಿದ್ದೇನೆ. ಒಂಭತ್ತು ತಿಂಗಳು 10 ದಿನಕ್ಕಿಂತ ಹೆಚ್ಚಿನ ದಿನದ ಪ್ರಯಾಣದ ಬಳಿಕ ಸೌದಿ ಅರೇಬಿಯಾ ತಲುಪಿ, 2023ನೇ ಸಾಲಿನ ಹಜ್‌ಗೆ ಅರ್ಜಿ ಹಾಕಿ ಹಜ್ ಪ್ರಕ್ರಿಯೆ ನಡೆಸುವುದು ನನ್ನ ಉದ್ದೇಶ. ಇದಕ್ಕೆ ನನ್ನ ಕುಟುಂಬ, ಗೆಳೆಯರ ಸಹಕಾರವಿದೆ’ ಎಂದು ಹೇಳಿದ್ದಾರೆ.
ತನ್ನ ಜೊತೆ 10 ಕೆ.ಜಿ ತೂಕದ ಬ್ಯಾಗ್ ಒಂದಿದೆ. ಅದರಲ್ಲಿ ಮಲಗಲು ಹಾಸುವ ಬಟ್ಟೆ, ನಾಲ್ಕು ಟೀ ಶರ್ಟ್ಸ್ ಮತ್ತು ಪ್ಯಾಂಟ್‌ಗಳು, ಕೈಯಲ್ಲೊಂದು ಉದ್ದದ ಕೊಡೆ ಇದೆ. ದಾರಿ ಮಧ್ಯೆ ರಾತ್ರಿ ಮಸೀದಿಗಳಲ್ಲಿ ತಂಗುತ್ತಿದ್ದಾರೆ. ಜನರು ಅವರಿಗೆ ಅನ್ನಾಹಾರ ಕೊಟ್ಟು ಸತ್ಕರಿಸಿ ಬೀಳ್ಕೊಡುತ್ತಿದ್ದಾರೆ. ನಿನ್ನೆ ಇವರು ನಗರದ ಕೋಟೆಕಾರ್ ಬೀರಿಯ ಹನಫಿ ಮಸ್ಜಿದ್‌ನಲ್ಲೇ ರಾತ್ರಿ ತಂಗಿದರು. ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ರಾಜ್ಯ ಹಜ್ ಕಮಿಟಿಯ ಮಾಜಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಮತ್ತಿತ್ತರರು ಶಿಹಾಬ್ ಅವರನ್ನು ಗಡಿಪ್ರದೇಶದಲ್ಲಿ ಬರ ಮಾಡಿಕೊಂಡರು.