Connect with us

LATEST NEWS

ಶಿರಾಡಿ ಘಾಟಿಯಲ್ಲಿ ಹೆದ್ದಾರಿ -ರೈಲು ಸಂಪರ್ಕ ಅಭಿವೃದ್ದಿಗೆ ಸಂಯೋಜಿತ ಡಿಪಿಆರ್ ತಯಾರಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾದ ಸಂಸದ ಕ್ಯಾ. ಚೌಟ

ಬೆಂಗಳೂರು ಎಪ್ರಿಲ್ 18: ಬೆಂಗಳೂರು – ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿಯಲ್ಲಿ ರಸ್ತೆ ಹಾಗೂ ರೈಲು ಮಾರ್ಗ ಅಭಿವೃದ್ದಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರೈಲು ಇಲಾಖೆ ಜಂಟಿಯಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ದ.ಕ. ಬಾಕಿ ಉಳಿದಿರುವ ಮೂಲಸೌಕರ್ಯ ಅಭಿವೃದ್ದಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.


ವಿಧಾನಸೌಧದ ಮುಖ್ಯ ಕಾರ್ಯದರ್ಶಿ ಅವರ ಕಚೇರಿಯಲ್ಲಿ ಭೇಟಿ ಮಾಡಿದ ಸಂಸದರು, ಮಂಗಳೂರು – ಬೆಂಗಳೂರು ನಡುವಿನ ಮುಖ್ಯ ಸಂಪರ್ಕವಾಗಿರುವ ಶಿರಾಡಿ ಘಾಟಿಯಲ್ಲಿ ಹೆದ್ದಾರಿ ಹಾಗೂ ರೈಲು ಹಳಿ ಸುಧಾರಣೆ ಸಂಬಂಧ ಡಿಪಿಆರ್ ತಯಾರಿ ಪ್ರಕ್ರಿಯೆ ನಡೆಯುತ್ತಿದೆ. ರಾಜಧಾನಿ ಬೆಂಗಳೂರಿನಿಂದ ಕರಾವಳಿ ನಗರಗಳಿಗೆ ಪ್ರಮುಖ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಈಗ ಇರುವ ರಸ್ತೆಗೆ ಹೆಚ್ಚುವರಿ ದ್ವಿಪಥ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಿಪಿಆರ್ ತಯಾರಿಗೆ ಮುಂದಾಗಿದೆ. ಇದಲ್ಲದೇ ಶಿರಾಡಿ ಘಾಟ್‌ನಲ್ಲಿ ಪ್ರತ್ಯೇಕ ರೈಲು ಮಾರ್ಗ ರಚಿಸಲು ರೈಲ್ವೆ ಇಲಾಖೆ ಕೂಡ ಡಿಪಿಆರ್‌ ಸಿದ್ಧಪಡಿಸಲು ಮುಂದಾಗಿದೆ. ಆದರೆ ಶಿರಾಡಿಯು ಪಶ್ಚಿಮ ಘಟ್ಟ ತಪ್ಪಲಿನಲ್ಲಿರುವುದರಿಂದ ಸೂಕ್ಷ್ಮ ಪರಿಸರ ವಲಯವಾಗಿ ಗುರುತಿಸಿಕೊಂಡಿದೆ. ಹೀಗಿರುವಾಗ ರಸ್ತೆ ಮತ್ತು ರೈಲು ಮಾರ್ಗಗಳ ಅಭಿವೃದ್ದಿಗೆ ಎರಡೂ ಇಲಾಖೆಗಳು ಸಮನ್ವಯ ಸಾಧಿಸಿ ಡಿಪಿಆರ್ ಸಿದ್ದಪಡಿಸಿದರೆ ಪರಿಸರದ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ಸಂಯೋಜಿತ ಯೋಜನೆ ರೂಪಿಸುವುದರಿಂದ ಇಲಾಖೆಗಳ ಅನುಮೋದನೆ ಪಡೆಯುವುದು ಸುಲಭವಾಗುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಅರಣ್ಯ ಇಲಾಖೆಯ ಅನುಮತಿ ಪಡೆಯುವುದಕ್ಕೂ ಅನುಕೂಲವಾಗಲಿದೆ ಎಂದು ಇದೇ ವೇಳೆ ಸಂಸದರು ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿದ್ದಾರೆ.

ಮಂಗಳೂರು ಬಂದರು ಹಾಗೂ ಕರಾವಳಿ ಅಭಿವೃದ್ದಿ ದೃಷ್ಟಿಯಿಂದ ಶಿರಾಡಿ ಘಾಟಿ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದು ಅತ್ಯವಶ್ಯಕವಾಗಿದೆ. ಅದೇ ರೀತಿ ಕರಾವಳಿ ಭಾಗಕ್ಕೆ ಹೆಚ್ಚಿನ ರೈಲು ಸಂಪರ್ಕವನ್ನು ಆರಂಭಿಸುವುದಕ್ಕೆ ಶಿರಾಡಿ ಘಾಟಿ ಭಾಗದಲ್ಲಿ ರೈಲ್ವೇ ಮೂಲಸೌಕರ್ಯವನ್ನು ಕೂಡಾ ಹೆಚ್ಚಿಸಬೇಕಾಗಿದೆ. ರೈಲು ಹಾಗೂ ಹೆದ್ದಾರಿಗಳು ಒಟ್ಟಿಗೆ ಅಭಿವೃದ್ದಿಯಾದರೆ ಮಂಗಳೂರಿನ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಹಾಗೂ ಸರಕು ಸಾಗಾಟ ಮತ್ತಷ್ಟು ಸುಗಮವಾಗಲಿದೆ. ಹೀಗಾಗಿ ಶಿರಾಡಿ ಘಾಟಿಯಲ್ಲಿ ರಸ್ತೆ ಮತ್ತು ರೈಲ್ವೇ ಅಭಿವೃದ್ದಿ ಹಿನ್ನಲೆಯಲ್ಲಿ ಸಂಯೋಜಿತ ಡಿಪಿಆರ್ ತಯಾರಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಗ್ಗೆ ಈಗಾಗಲೇ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಹೀಗಿರುವಾಗ ಎರಡೂ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಒಂದಕ್ಕೊಂದು ಪೂರಕ ಡಿಪಿಆರ್ ತಯಾರಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕ್ಯಾ. ಚೌಟ ಕೋರಿದ್ದಾರೆ.
ರಸ್ತೆ ಹಾಗೂ ರೈಲು ಮೂಲಸೌಕರ್ಯ ಹೆಚ್ಚಿಸುವುದಕ್ಕೆ ಸಂಬಂಧಪಟ್ಟ ಇಲಾಖೆಗಳ ಜತೆ ಸಮನ್ವಯತೆ ಸಾಧಿಸುವ ಮೂಲಕ ಕೇಂದ್ರದ ಏಜೆನ್ಸಿಗಳಿಗೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುವುದಾಗಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಭರವಸೆ ನೀಡಿದ್ದಾರೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *