LATEST NEWS
ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪ್ವೆಲ್ ಅರೆಸ್ಟ್

ಮಂಗಳೂರು ಮೇ 27: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್‌ಗೆ ಕರೆ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತ ಕಾರ್ಯವಾಹ ಶರಣ್ ಪಂಪ್‌ವೆಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಶರಣ್ ಪಂಪ್ ವಲ್ ಅರೆಸ್ಟ್ ಬೆನ್ನಲ್ಲೇ ಹಿಂದೂ ಸಂಘಟನೆ ಕಾರ್ಯಕರ್ತರು ಕದ್ರಿ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆಯ ಹಿನ್ನೆಲೆಯಲ್ಲಿ ಮೇ 1ರಂದು ಎಜೆ ಆಸ್ಪತ್ರೆಯ ಬಳಿ ಜಮಾಯಿಸಿದ್ದ ಕಾರ್ಯಕರ್ತರ ಬೇಡಿಕೆಯಂತೆ, ಶರಣ್ ಪಂಪೈಲ್ ಮರುದಿನ ಮೇ 2ರಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಮಾಡುವಂತೆ ಕರೆ ಕೊಟ್ಟಿದ್ದರು. ಅದರಂತೆ, ಮರುದಿನ ಈ ಹೇಳಿಕೆಯಿಂದ ಪ್ರೇರಣೆ ಪಡೆದ ಕಾರ್ಯಕರ್ತರು ಬಸ್ಸಿಗೆ ಕಲ್ಲು ತೂರಿದ್ದಲ್ಲದೆ, ಕೆಲವು ಕಡೆ ಮುಸ್ಲಿಂ ಯುವಕರಿಗೆ ಚೂರಿ ಇರಿತ ಮಾಡಿದ್ದರು. ಅಹಿತಕರ ಘಟನೆಗಳಿಗೆ ಶರಣ್ ಪಂಪೈಲ್ ಬಂದ್ ಕರೆ ಮತ್ತು ಸುಹಾಸ್ ಶೆಟ್ಟಿಯನ್ನು ಪಿಎಫ್‌ಐನ ಜಿಹಾದಿ ಇಸ್ಲಾಮಿ ಭಯೋತ್ಪಾದಕರು ಮಾಡಿದ್ದಾರೆಂದು ಉದ್ರೇಕಿಸಿದ್ದು ಕಾರಣವೆಂದು ಕದ್ರಿ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು.

ಈ ಬಗ್ಗೆ ಶರಣ್ ಪಂಪ್‌ವೆಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 49 (ಅಪರಾಧ ಕೃತ್ಯಕ್ಕೆ ಪ್ರಚೋದಿಸುವುದು), ಸೆಕ್ಷನ್ 196 (1) (ಎರಡು ಗುಂಪುಗಳ ನಡುವೆ ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಅಥವಾ ಇತರ ಕಾರಣದಿಂದ ದ್ವೇಷವನ್ನು ಹುಟ್ಟಿಸುವುದು), ಸೆಕ್ಷನ್ 324 (2) (ದುಷ್ಕೃತ್ಯ ನಡೆಸುವುದು), ಸೆಕ್ಷನ್ 324 (4) (ದುಷ್ಕೃತ್ಯದಿಂದ ಸ್ವತ್ತುಗಳನ್ನು ಹಾನಿಗೊಳಿಸುವುದು), ಸೆಕ್ಷನ್ 324 (5) (ಮಾರಕಾಸ್ತ್ರ ಬಳಸಿ ಘಾಸಿಗೊಳಿಸುವುದು), 353 (2)ರ (ಸುಳ್ಳು ಮಾಹಿತಿ ಅಥವಾ ಸುಳ್ಳು ಸುದ್ದಿ ಹರಡುವುದು) ಅಡಿ ಎಫ್‌ಐಆರ್ ದಾಖಲಾಗಿತ್ತು.
ಇದೀಗ ಇದೇ ಪ್ರಕರಣ ಸಂಬಂಧಿಸಿ ದಾಖಲೆಗಳನ್ನು ಸಂಗ್ರಹಿಸಿ, ವಿಚಾರಣೆಗೆ ಹಾಜರಾಗಲು ಎರಡು ಬಾರಿ ನೋಟೀಸ್ ನೀಡಲಾಗಿತ್ತು. ವಿಚಾರಣೆಗೆ ಬಾರದೆ ತನಿಖೆಗೂ ಸಹಕಾರ ನೀಡದೇ ಇದ್ದ ಶರಣ್ ಪಂಪೈಲ್ ಅವರನ್ನು ಮೇ 27ರಂದು ಬಂಧನ ಮಾಡಲಾಗಿದೆ. ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.