LATEST NEWS
ದ್ವೇಷ ಭಾಷಣ ಪ್ರಕರಣ: ಶರಣ್ ಪಂಪ್‌ವೆಲ್ ಬಂಧಿಸದಂತೆ ಹೈಕೋರ್ಟ್ ನಿರ್ದೇಶನ

ಮಂಗಳೂರು ಜುಲೈ 10: ದ್ವೇಷ ಭಾಷಣ ಮಾಡಿದ ಆರೋಪದಡಿ ವಿಶ್ವಹಿಂದೂ ಪರಿಷತ್ ನಾಯಕ ಶರಣ್ ಕುಮಾರ್ ಅಲಿಯಾಸ್ ಶರಣ್ ಪಂಪ್‌ವೆಲ್ ಬಂಧಿಸಬಾರದು ಮತ್ತು ಹೈಕೋರ್ಟ್ ಅನುಮತಿ ನೀಡದ ಹೊರತು ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಶರಣ್ ಪಂಪ್‌ವೆಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಅವರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. “ವಿನಾಕಾರಣ ದ್ವೇಷ ಭಾಷಣದ ಆರೋಪ ಹೊರಿಸಲಾಗಿದೆ” ಎಂದು ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠ, “ಶರಣ್ ಪಂಪ್‌ವೆಲ್ ಬಂಧನ ಸೇರಿದಂತೆ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದೆ. ಹಾಗೆ, ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಶರಣ್ ಪಂಪ್‌ವೆಲ್ ಅವರಿಗೆ ಸೂಚನೆ ನೀಡಿದೆ.

ಕಡಬ ಪೊಲೀಸರು ತಮ್ಮ ದಾಖಲಿಸಿರುವ ಎಫ್ಐಆರ್ ಪ್ರಶ್ನಿಸಿ ವಿಹೆಚ್ಪಿಯ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ನವೀನ್ ನೆರಿಯ ಅವರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. “ಯಾವುದೇ ಅಪರಾಧದ ಅಂಶಗಳಿಲ್ಲದಿದ್ದರೂ ಎಫ್ಐಆರ್ ದಾಖಲಿಸಿದ್ದಾರೆಂದು” ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್ ಎಫ್ಐಆರ್ಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಕಡಬ ಪೊಲೀಸರು ರಾತ್ರಿ ವೇಳೆ ಮನೆಗೆ ಪ್ರವೇಶಿಸಿ ಜಿಪಿಎಸ್ ಫೋಟೋ ತೆಗೆದಿರುವುದು ಏಕೆಂದು ಪ್ರಶ್ನಿಸಿದ್ದಕ್ಕೆ ನಮ್ಮ ಮುಖಂಡರ ಮೇಲೆ ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದರೆ ಎಂದು ಆರೋಪಿಸಿ ಕಡಬ ಪೊಲೀಸ್ ಠಾಣೆಯ ಎದುರು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಕಾರ್ಯದರ್ಶಿ ನವೀನ್ ನೆರಿಯ ಪೊಲೀಸರನ್ನು ಉದ್ದೇಶಿಸಿ ದ್ವೇಷದ ಭಾಷಣ ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.