LATEST NEWS
ಉಡುಪಿ – ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಸಿಸಿಟಿವಿಯಲ್ಲಿ ಸೆರೆಯಾದ ಆರೋಪಿ ಚಲನವಲನ

ಉಡುಪಿ ಜನವರಿ 25: ಅಪರಿಚಿತ ವ್ಯಕ್ತಿಯೊಬ್ಬ ಐದು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಉಡುಪಿಯಲ್ಲಿ ನಡೆದಿದ್ದು, ಈ ಬಗ್ಗೆ ಬಾಲಕಿಯ ಪೋಷಕರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ನಗರದ ಪಿಪಿಸಿ ಸಮೀಪದ ಓಣಿಯಲ್ಲಿ ಗುರುವಾರ ಮಧ್ಯಾಹ್ನ ವೇಳೆ ನಡೆದಿದೆ. ಸುಮಾರು 30 ವರ್ಷದ ಯುವಕ ಈ ಕೃತ್ಯ ಎಸಗಿದ್ದಾನೆ.
ಭಿಕ್ಷೆ ಬೇಡುತ್ತಾ ಓಡಾಡುತ್ತಿದ್ದ ವ್ಯಕ್ತಿಯೋರ್ವನ ಕೃತ್ಯ ಇದಾಗಿದ್ದು, ಆರೋಪಿಯ ಚಲನವಲನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಪರಾರಿಯಾಗಿದ್ದಾನೆ. ಮತ್ತೋರ್ವ ಬಾಲಕಿ ಜೊತೆ ಓಡಾಡುತ್ತಿದ್ದ ಈಕೆಗೆ ಚಾಕಲೇಟ್ ಆಸೆ ತೋರಿಸಿದ ಆರೋಪಿ, ಆಕೆಯನ್ನು ಅಂಗಡಿ ಪಕ್ಕದ ಕಾಲುದಾರಿಯಲ್ಲಿ ಕರೆದುಕೊಂಡು ಹೋಗಿ ದಾರಿ ಬದಿಯ ಬೇಲಿ ಪಕ್ಕದಲ್ಲಿ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದು, ಬಾಲಕಿಯನ್ನು ಹುಡುಕಿಕೊಂಡು ಬಂದ ಇನ್ನೋರ್ವ ಬಾಲಕಿಯನ್ನು ಕಂಡು ಪರಾರಿಯಾಗಿದ್ದಾನೆ.

ಆತ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ಪೋಷಕರಲ್ಲಿ ತಿಳಿಸಿದ್ದು, ಆ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ಶೋಧ ಕಾರ್ಯದಲ್ಲಿದ್ದಾರೆ. ಈ ಪ್ರಕರಣದ ಕುರಿತು ತ್ವರಿತ ಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ನೀಡಿದ್ದಾರೆ. ಅಪಘಾತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಘಟನೆಯ ಮಾಹಿತಿ ಬಂದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಘಟನೆಯ ವಿವರ ಪಡೆದಿದ್ದಾರೆ.
ಆರೋಪಿಯ ಬಗ್ಗೆ ಮಾಹಿತಿಗೆ ಮನವಿ ಬಾಲಕಿಯ ಲೈಂಗಿಕ ಕಿರುಕುಳ ಪ್ರಕರಣದ ಶಂಕಿತ ಆರೋಪಿಯ ಫೋಟೋ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು ಈತನ ಬಗ್ಗೆ ಸಾರ್ವಜನಿಕರು ಯಾವುದೇ ಮಾಹಿತಿಯಿದ್ದಲ್ಲಿ ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಕಂಟ್ರೋಲ್ ರೂಮ್ : 9480805400
ಪೊಲೀಸ್ ನಿರೀಕ್ಷಕರು, ಮಹಿಳಾ ಠಾಣೆ : 9480805430
ಮಹಿಳಾ ಠಾಣೆ : 08202525599
ಪೊಲೀಸ್ ಉಪನಿರೀಕ್ಷಕರು, ಮಹಿಳಾ ಠಾಣೆ : 8277988949