LATEST NEWS
ಧರ್ಮಬೋಧಕನಿಂದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
ಚೆನೈ: ಅಪ್ರಾಪ್ತ ವಿದ್ಯಾರ್ಥಿನಿಯರ ಜತೆ ಅಶ್ಲೀಲ ವರ್ತನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಇರುವ ಶಾಲಾ ವಿದ್ಯಾರ್ಥಿಗಳಿಗೆ ಬೈಬಲ್ ಪ್ರಚಾರ ಮಾಡುವ ಸ್ಕ್ರಿಪ್ಚರ್ ಯೂನಿಯನ್ ಹೆಸರಿನ ಕ್ರಿಶ್ಚಿಯನ್ ಸಂಘಟನೆಯೊಂದು ತನ್ನ ಧರ್ಮಬೋಧಕರೊಬ್ಬರನ್ನು ಅಮಾನತು ಮಾಡಿದೆ.
ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿರುವ ಸುಮಾರು 20ಕ್ಕೂ ಹೆಚ್ಚು ಸ್ಕ್ರೀನ್ ಶಾಟ್ಗಳನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಆರೋಪಿ ಧರ್ಮಬೋಧಕ ಸಾಮ್ಯುವೆಲ್ ಜೈಸುಂದರ್ ಎಂಬುವರನ್ನು ಅಮಾನತು ಮಾಡಲಾಗಿದೆ.
ಸಾಮ್ಯುಯೆಲ್ ಜೈಸುಂದರ್ರನ್ನು ಸ್ಕ್ರಿಪ್ಚರ್ ಯೂನಿಯನ್ ತನ್ನ ಇಂಗ್ಲಿಷ್ ಪಬ್ಲಿಕೇಶನ್ನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತ್ತು. ಕಳೆದ ಭಾನುವಾರ ಟ್ವಿಟರ್ ಬಳಕೆದಾರ ಅನೇಕ ಸ್ಕ್ರೀನ್ಶಾಟ್ಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಸಾಮ್ಯುಯೆಲ್ ತುಂಡುಡುಗೆ ಧರಿಸಿರುವ ಫೋಟೋಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ ಎಂದು 10 ರಿಂದ 15 ವರ್ಷ ನಡುವಿನ ವಿದ್ಯಾರ್ಥಿನಿಯರಿಗೆ ಕೇಳಿರುವ ಆರೋಪ ಎದುರಾಗಿದೆ.
ಅಲ್ಲದೆ, ಒಂದು ನಿರ್ಧಿಷ್ಟ ಸ್ಕ್ರೀನ್ಶಾಟ್ನಲ್ಲಿ ಹುಡುಗರಿಗೆ ಯಾವಾಗಲಾದರೂ ಕಿಸ್ ಮಾಡಿದ್ದೀಯ? ಎಂದು ಪ್ರಶ್ನಿಸಿದ್ದಲ್ಲದೆ, ಆಕೆಯ ರಿಲೇಷನ್ಶಿಪ್ ಬಗ್ಗೆ ಕೇಳಿದ್ದಾರೆ. ಸಾಮ್ಯುಯೆಲ್ ಮತ್ತವರ ತಂಡ ನಿಯಮಿತವಾಗಿ ತಮಿಳುನಾಡಿನಾದ್ಯಂತ ನಡೆಯುವ ಕ್ರಿಶ್ಚಿಯನ್ ಮಿಶನರಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದರು. ದಶಕಗಳಿಂದ ವಕೇಶನಲ್ ಬೈಬಲ್ ಸ್ಕೂಲ್ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದರು. ಅಲ್ಲದೆ, ಬೈಬಲ್ ಅಧ್ಯಯನಕ್ಕಾಗಿ ಬೇಸಿಗೆ ಶಿಬಿರಗಳನ್ನು ಸಹ ಆಯೋಜಿಸುತ್ತಿದ್ದರು.
ಕೆಲ ಯುವತಿಯರು ಸಹ ತಾವು ಅಪ್ರಾಪ್ತೆಯರಾಗಿದ್ದಾಗ ಸ್ಯಾಮೆಯೆಲ್ ಅನುಚಿತವಾಗಿ ವರ್ತಿಸಿದ್ದಾಗಿ ಆರೋಪಿಸಿದ್ದಾರೆ. ಅನೇಕ ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಾರೆ. ಕೆಲವರಿಗೆ ಫೇಸ್ಬುಕ್ ಮೂಲಕ ಬಟ್ಟೆಗಳ ಬಗ್ಗೆ ಕಮೆಂಟ ಮಾಡಿದ್ದಾರೆ. ಅಶ್ಲೀಲ ಸೆಲ್ಫಿ ಫೋಟೋಗಳನ್ನು ಕಳುಹಿಸುವಂತೆ ಕೇಳಿದ್ದರು ಎಂದು ಸಾಕಷ್ಟು ಹೆಣ್ಣು ಮಕ್ಕಳು ಸ್ಯಾಮೆಯೆಲ್ ವಿರುದ್ಧ ಆರೋಪಿಸಿದ್ದು, ಎಲ್ಲರ ಸ್ಕ್ರೀನ್ಶಾಟ್ಗಳನ್ನು ಸಂಗ್ರಹಿಸಿ, ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿ ಧರ್ಮಬೋಧಕನ ಕರಾಳ ಮುಖವನ್ನು ಅನಾವರಣ ಮಾಡಿದ್ದಾರೆ. ಇದೀಗ ಆತನನ್ನು ಅಮಾನತು ಮಾಡಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.