LATEST NEWS
ಚುನಾವಣಾ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧನಿಂದ ಲೈಂಗಿಕ ಕಿರುಕುಳ; ವಜಾ
ಕೋಲ್ಕತ್ತ, ಮೇ 20: ಪಶ್ಚಿಮ ಬಂಗಾಳದ ಉಲುಬೇರಿಯಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಯೋಧನನ್ನು ಲೈಂಗಿಕ ಕಿರುಕುಳ ಆರೋಪ ಬಂದ ಹಿನ್ನೆಲೆಯಲ್ಲಿ ಕೆಲಸದಿಂದ ವಜಾ ಮಾಡಿ ಚುನಾವಣಾ ಆಯೋಗ ಆದೇಶಿಸಿದೆ.
ಭಾನುವಾರ ಸಂಜೆ, ಉಲುಬೇರಿಯಾ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ‘ಆರೋಪಿತ ಯೋಧನನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ಪೊಲೀಸ್ ವರದಿಗಾಗಿ ನಾವು ಕಾಯುತ್ತಿದ್ದೇವೆ. ತಪ್ಪಿತಸ್ಥರೆಂದು ಸಾಬೀತಾದರೆ, ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ಎಂದು ಅಧಿಕಾರಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ 7 ಲೋಕಸಭಾ ಕ್ಷೇತ್ರಗಳಲ್ಲಿ ಭಾರಿ ಭದ್ರತೆಯ ನಡುವೆ ಮತದಾನ ನಡೆಯುತ್ತಿದೆ. ಶೇಕಡ 57ರಷ್ಟು ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಿರುವ ಚುನಾವಣಾ ಆಯೋಗವು 30,000 ಪೊಲೀಸರ ಜೊತೆ 60,000 ಕೇಂದ್ರೀಯ ಪಡೆಗಳ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಈ ಹಿಂದೆ ನಡೆದ ಯಾವುದೇ ಹಂತದ ಚುನಾವಣೆಯಲ್ಲಿ ಇಷ್ಟು ಪ್ರಮಾಣದ ಭದ್ರತಾ ಸಿಬ್ಬಂದಿ ನಿಯೋಜನೆ ಆಗಿರಲಿಲ್ಲ ಎಂದು ವರದಿ ತಿಳಿಸಿದೆ.