LATEST NEWS
ಮೂರು ದಿನದೊಳಗೆ ಸೋನಿಯಾ ಗಾಂಧಿ ಗುಣಮುಖರಾಗದಿದ್ದರೆ ದೇವಸ್ಥಾನಕ್ಕೆ ಪ್ರವೇಶ ಮಾಡುವುದಿಲ್ಲ – ಜನಾರ್ಧನ ಪೂಜಾರಿ ಶಪಥ

ಮೂರು ದಿನದೊಳಗೆ ಸೋನಿಯಾ ಗಾಂಧಿ ಗುಣಮುಖರಾಗದಿದ್ದರೆ ದೇವಸ್ಥಾನಕ್ಕೆ ಪ್ರವೇಶ ಮಾಡುವುದಿಲ್ಲ – ಜನಾರ್ಧನ ಪೂಜಾರಿ ಶಪಥ
ಮಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾಗಾಂಧಿಯವರ ಆರೋಗ್ಯಕ್ಕಾಗಿ ಕುದ್ರೋಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೇಸ್ ಮುಖಂಡ ಜನಾರ್ಧನ ಪೂಜಾರಿ ಅವರು ಮೂರು ದಿನದೊಳಗೆ ಸೋನಿಯಾ ಗಾಂಧಿ ಗುಣಮುಖರಾಗದಿದ್ದರೆ ನಾನು ದೇವಸ್ಥಾನಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಶಪಥ ಮಾಡಿದರು.
ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಅಧಿನಾಯಕಿ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸ ದಿಲ್ಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ನಿಯಮಿತ ತಪಾಸಣೆಗಾಗಿ ದಾಖಲಿಸಲಾಗಿದೆ. ಸೋನಿಯಾ ಶೀಘ್ರ ಚೇತರಿಕೆಗಾಗಿ ಮಂಗಳೂರು ,ಕುದ್ರೋಳಿ ಗೋಕರ್ನಾಥೇಶ್ವರ ಕ್ಷೇತ್ರದಲ್ಲಿ ಮಾಜಿ ವಿತ್ತ ಸಚಿವ ಜನಾರ್ಧನ ಪೂಜಾರಿಯವರು ಪ್ರಾರ್ಥನೆ ಸಲ್ಲಿಸಿ, ಸೋನಿಯಾ ಗಾಂಧಿ ಶೀಘ್ರ ಗುಣಮುಖರಾಗುವಂತೆ ಬೇಡಿಕೊಂಡರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೊನೀಯಾ ಗಾಂಧಿಯವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ. ಪ್ರತೀ ಸಲವೂ ಅವರು ಅನಾರೋಗ್ಯಪೀಡಿತರಾದಾಗ ಅವರು ಗಂಗಾರಾಮ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಈ ಬಾರಿಯೂ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಅವರ ಮಕ್ಕಳು ಬಹಳ ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ ಎಂದರು.
ಕುದ್ರೋಳಿ ಕ್ಷೇತ್ರಕ್ಕೂ ಸೋನಿಯಾ ಗಾಂದಿಗೂ ಅವಿನಾಭಾವ ಸಂಬಂಧ.ಜಿಲ್ಲೆಗೆ ಆಗಮಿಸುವಾಗ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು, ಕೋಶಾಧಿಕಾರಿ ಹಾಗೂ ಸದಸ್ಯರು ಸೇರಿ ಪ್ರಾರ್ಥನೆ ಮಾಡಿದ್ದೇವೆ. ದೇವರೇ ಸೋನಿಯಾರವರನ್ನು ಬದುಕಿಸಿ ಅಂತ ಕೇಳಿಕೊಂಡಿದ್ದೇವೆ. ದೇವರು ಅವರನ್ನು ಬದುಕಿಸುತ್ತಾರೆ ಅನ್ನುವ ನಂಬಿಕೆ ನನಗಿದೆ. ಇನ್ನು ಮೂರು ದಿವಸಗೊಳಗಾಗಿ ಸೋನಿಯಾ ಗಾಂಧಿ ಗುಣಮುಖರಾಗದಿದ್ದರೆ ದೇವಸ್ಥಾನದೊಳಗೆ ಪ್ರವೇಶ ಮಾಡುವುದಿಲ್ಲ ಅಂತ ದೇವರ ಮೇಲೆ ಪ್ರಮಾಣ ಮಾಡುತ್ತಿದ್ದೇನೆ ಅಂತ ಹೇಳಿದರು.