LATEST NEWS
ಸೋನಿಯಾಗಾಂಧಿ ಆಪ್ತ ರಾಜ್ಯ ಸಭಾ ಸದಸ್ಯ ಅಹ್ಮದ್ ಪಟೇಲ್ ವಿಧಿವಶ
ನವದೆಹಲಿ ನವೆಂಬರ್ 25: ಕಾಂಗ್ರೇಸ್ ನ ಹಿರಿಯ ಮುಖಂಡ ರಾಜ್ಯ ಸಭಾ ಸದಸ್ಯ, ಸೋನಿಯಾಗಾಂಧಿಯವರ ಆಪ್ತ ಅಹ್ಮದ್ ಪಟೇಲ್(71) ಇಂದು ವಿಧಿವಶರಾಗಿದ್ದಾರೆ.
ಅಹ್ಮದ್ ಪಟೇಲ್ ಅವರಿಗೆ ಕೆಲ ವಾರಗಳ ಹಿಂದಷ್ಟೇ ಕೊರೊನಾ ಸೋಂಕು ತಗುಲಿತ್ತು. ಗುರುಗ್ರಾಮದ ಮೆಡಂತಾ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೂ ಮುನ್ನ ಫರಿದಾಬಾದ್‍ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಹೀಗಾಗಿ ಮೆಡಂತಾ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.
ತಮಗೆ ಕೊರೊನಾ ಸೋಂಕು ತಗುಲಿದ ಕುರಿತು ಅಕ್ಟೋಬರ್ 1ರಂದು ಸ್ವತಃ ಅಹ್ಮದ್ ಪಟೇಲ್ ಅವರೇ ಖಚಿತಪಡಿಸಿದ್ದರು. ಅಲ್ಲದೆ ಹೋಮ್ ಐಸೋಲೇಟ್ ಆಗುತ್ತಿರುವುದಾಗಿ ಮಾಹಿತಿ ನೀಡಿದ್ದರು. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಫರಿದಾಬಾದ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೂ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಮೆಡಂತಾ ಆಸ್ಪತ್ರೆಗೆ ದಾಖಲಾಗಿದ್ದರು.
ಅಹ್ಮದ್ ಪಟೇಲ್ ಸುದ್ದಿ ಅಘಾತವನ್ನುಂಟು ಮಾಡಿದೆ. ತಮ್ಮ ಬಹುತೇಕ ಜೀವನವನ್ನ ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು. ಕಾಂಗ್ರೆಸ್ ಪಕ್ಷ ಕಟ್ಟುವಲ್ಲಿ ಅಹ್ಮದ್ ಪಟೇಲ್ ಅವರ ಪಾತ್ರ ಪ್ರಮುಖವಾದದ್ದು. ತಮ್ಮ ಅಗಾಧ ನೆನಪಿನ ಶಕ್ತಿಗೆ ಪಟೇಲರು ಹೆಸರುವಾಸಿಯಾಗಿದ್ದರು. ಪಟೇಲ್ ಅವರ ಪುತ್ರ ಫೈಸಲ್ ಜೊತೆ ಮಾತನಾಡಿದ್ದು, ಅಹ್ಮದ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.