ಉಡುಪಿ ಜುಲೈ 19: ಮುಂಬೈ ಪೊಲೀಸ್ ಸೋಗಿನಲ್ಲಿ ಹಿರಿಯ ನಾಗರಿಕರೊಬ್ಬರನ್ನು ಐದು ದಿನಗಳ ಕಾಲ ‘ಡಿಜಿಟಲ್ ಅರೆಸ್ಟ್’ ನಲ್ಲಿ ಇಟ್ಟು, ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ 65 ಲಕ್ಷ ರೂಪಾಯಿಗಳನ್ನು ದೋಚಿರುವ ಸೈಬರ್ ಅಪರಾಧ ಪ್ರಕರಣವೊಂದು ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ದೂರಿನ ವಿವರಗಳ ಪ್ರಕಾರ, ಜುಲೈ 13 ರಂದು ಬೆಳಿಗ್ಗೆ ಸಂತ್ರಸ್ಥೆ ಮಹಿಳೆಯ ಮೊಬೈಲ್ಗೆ ‘ಮುಂಬೈ ಪೊಲೀಸ್ ಡಿಪಾರ್ಟ್ಮೆಂಟ್’ ಹೆಸರಿನಲ್ಲಿ ವಾಟ್ಸಪ್ ಸಂದೇಶವೊಂದು ಬಂದಿತ್ತು. ಬೆನ್ನಲ್ಲೇ ಅದೇ ನಂಬರ್ನಿಂದ ವಿಡಿಯೋ ಕಾಲ್ ಬಂದಿದ್ದು, ಅದರಲ್ಲಿ ಪೊಲೀಸ್ ಯೂನಿಫಾರ್ಮ್ ಧರಿಸಿದ್ದ ವ್ಯಕ್ತಿಯೊಬ್ಬ ತಾನು ‘ಮುಂಬೈ ಕೊಲಬಾ ಪೊಲೀಸ್ ಇನ್ಸ್ಪೆಕ್ಟರ್’ ಎಂದು ಪರಿಚಯಿಸಿಕೊಂಡಿದ್ದಾನೆ. ಮನೆಯಲ್ಲಿ ಯಾರಿದ್ದಾರೆ ಎಂದು ವಿಚಾರಿಸಿ, ಶೀಲಾ ಅವರು ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ಆತ, ಬ್ಲ್ಯಾಕ್ಮೇಲ್ ತಂತ್ರ ಆರಂಭಿಸಿದ್ದಾನೆ. “ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ 20 ಕೋಟಿ ಅಕ್ರಮ ಹಣ ಜಮಾ ಆಗಿದೆ. ನಿಮ್ಮ ಹೆಸರಿನಲ್ಲಿ ವಾರೆಂಟ್ ಜಾರಿಯಾಗಿದ್ದು, ಮಂಗಳೂರು ಪೊಲೀಸರು ನಿಮ್ಮನ್ನು ಸದ್ಯದಲ್ಲೇ ಅರೆಸ್ಟ್ ಮಾಡಲಿದ್ದಾರೆ” ಎಂದು ಹೆದರಿಸಿದ್ದಾನೆ.
ಗಾಬರಿಗೊಂಡ ಹಿರಿಯ ನಾಗರಿಕೆಯನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತಗೊಂಡ ವಂಚಕ, ಆಕೆಯ ಇತರ ಬ್ಯಾಂಕ್ ಖಾತೆಗಳ ವಿವರ ಹಾಗೂ ಫೋಟೋಗಳನ್ನು ಬಲವಂತವಾಗಿ ಪಡೆದುಕೊಂಡಿದ್ದಾನೆ. “ಈ ಗಂಭೀರ ಕೇಸ್ನಿಂದ ನೀವು ಹೊರಬರಬೇಕಾದರೆ ನಿಮ್ಮ ಖಾತೆಯಲ್ಲಿರುವ ಹಣದ ನೋಟುಗಳ ಸೀರಿಯಲ್ ನಂಬರ್ಗಳನ್ನು ನಾವು ವೆರಿಫೈ ಮಾಡಬೇಕು. ಅದಕ್ಕಾಗಿ ನಾವು ಹೇಳುವ ಆರ್ಬಿಐ ಅಧಿಕೃತ ಖಾತೆಗಳಿಗೆ ಹಣವನ್ನು ವರ್ಗಾಯಿಸಿ, ತಪಾಸಣೆ ಮುಗಿದ ಬಳಿಕ ಹಣ ವಾಪಸ್ ಬರುತ್ತದೆ” ಎಂದು ನಂಬಿಸಿದ್ದಾನೆ. ಜುಲೈ 13 ರಿಂದ ಜುಲೈ 17 ರವರೆಗೆ ಸತತ ಐದು ದಿನಗಳ ಕಾಲ ಪದೇಪದೇ ವಾಟ್ಸಪ್ ಕರೆಗಳನ್ನು ಮಾಡಿ ವೃದ್ಧೆಯನ್ನು ತೀವ್ರ ಮಾನಸಿಕ ಒತ್ತಡದಲ್ಲಿ ಇರಿಸಿದ್ದ ಸೈಬರ್ ಕಳ್ಳರು, ಹಂತ ಹಂತವಾಗಿ ಒಟ್ಟು 65 ಲಕ್ಷ ರೂ. ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ತಾವು ಮೋಸ ಹೋಗಿರುವುದನ್ನು ಅರಿತ ಮಹಿಳೆ ಸೆನ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.