LATEST NEWS
ಒಂದು ಸೆಲ್ಫಿಗೆ ಸಸ್ಪೆಂಡ್ ಆದ ಉರ್ವ ಠಾಣೆಯ ಪೊಲೀಸ್ ಹೆಡ್ ಕಾನ್‌ಸ್ಟೆಬಲ್

ಮಂಗಳೂರು ಫೆಬ್ರವರಿ 26: ಸೈಬರ್ ವಂಚನೆ ಪ್ರಕರಣದ ಆರೋಪಿಗಳ ಜೊತೆಗೆ ತಿರುಗಾಟ ನಡೆಸಿದ್ದಲ್ಲದೆ ಅವನ ಜೊತೆ ಸೆಲ್ಫಿ ತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಉರ್ವ ಠಾಣೆಯ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಪೀಟರ್ ಡಿಸೋಜ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಈ ಘಟನೆ ಸಂಬಂಧ ಉರ್ವ ಠಾಣೆಯ ಇನ್‌ಸ್ಪೆಕ್ಟರ್ (ಭಾರತಿ) ಅವರ ವಿರುದ್ಧ ಇಲಾಖಾ ಶಿಸ್ತು ಕ್ರಮಕೈಗೊಂಡಿದ್ದಾರೆ.
ಅಮೆಜಾನ್ ಕಂಪನಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಆರೋಪಿಗಳನ್ನು ಕಸ್ಟಡಿಗೆ ಪಡೆದ ಸಂದರ್ಭದಲ್ಲಿ ಪೊಲೀಸರು ರಾಜಸ್ಥಾನಕ್ಕೆ ತೆರಳಿದಾಗ ಸೆಲ್ಪಿ ತೆಗೆದುಕೊಂಡಿದ್ದರು ಎನ್ನಲಾಗಿದೆ. ಪ್ರಕರಣದ ತನಿಖೆಯ ಹೊಣೆಯನ್ನು ಉರ್ವಾ ಇನ್ಸ್ ಪೆಕ್ಟರ್ ವಹಿಸಿಕೊಂಡಿದ್ದರು. ಈ ವೇಳೆ, ಬೆಂಗಳೂರು ಏರ್ ಪೋರ್ಟ್ ನಿಂದ ರಾಜಸ್ಥಾನದ ಜೈಪುರಕ್ಕೆ ಇತರೇ ಸಿಬಂದಿಯೊಂದಿಗೆ ವಿಮಾನದಲ್ಲಿ ತೆರಳಿದ್ದರು.

ಈ ವೇಳೆ ಪೊಲೀಸರು ಆರೋಪಿಗಳ ಜೊತೆಗೇ ಸಲುಗೆ ಬೆಳೆಸಿಕೊಂಡು ರಾಜಸ್ಥಾನದ ಪ್ರವಾಸಿ ಸ್ಥಳಗಳಿಗೆ ಸುತ್ತಾಟ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಆರೋಪಿ ರಾಜಕುಮಾರ್ ಮೀನಾ ಮೊಬೈಲ್ ಹಿಡಿದು ತಾನೇ ಪೊಲೀಸರೊಂದಿಗೆ ಸೆಲ್ಪಿ ತೆಗೆಸಿಕೊಂಡಿರುವ ಫೋಟೋಗಳಿವೆ. ಮತ್ತೊಂದು ಫೋಟೋದಲ್ಲಿ ಪೊಲೀಸ್ ಸಿಬಂದಿಯೇ ಆರೋಪಿ ಹೆಗಲಿಗೆ ಕೈಹಾಕಿರುವ ರೀತಿಯ ಪೋಸು ಇದೆ. ಇದೀಗ ಸೈಬರ್ ವಂಚನೆ ಪ್ರಕರಣದ ಆರೋಪಿಗಳ ಜೊತೆಗೆ ಸುತ್ತಾಟಕ್ಕೆ ಹೋಗಿ ಪೊಲೀಸರು ಸೆಲ್ಪಿ ತೆಗೆದುಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಘಟನೆ ಸಂಬಂಧಿಸಿ ಉರ್ವಾ ಠಾಣೆಯ ಹೆಡ್ ಕಾನ್ಸ್ ಟೇಬಲ್ ಪೀಟರ್ ಡಿಸೋಜ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಜೊತೆಗೆ, ಒಟ್ಟು ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಇನ್ಸ್ ಪೆಕ್ಟರ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಂದಾಗಿದ್ದಾರೆ.
ತನಿಖೆಗೆ ತೆರಳಿದ್ದ ಸಮಯದಲ್ಲಿ ಆರೋಪಿ ರಾಜ್ ಕುಮಾರ್ ಜೊತೆ ಪೀಟರ್ ಡಿಸೋಜ ಸೆಲ್ಪಿ ತೆಗೆಸಿಕೊಂಡಿರುವುದು ಇಲಾಖಾ ಶಿಸ್ತಿನ ಉಲ್ಲಂಘನೆ. ಹಾಗಾಗಿ ಅವರನ್ನು ಅಮಾನತು ಮಾಡಲಾಗಿದೆ. ಠಾಣೆಯ ಇನ್‌ಸ್ಪೆಕ್ಟರ್ ಅವರು ಈ ಘಟನೆಯ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಹಾಗಾಗಿ ಅವರ ವಿರುದ್ಧವೂ ಶಿಸ್ತು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.