National
ಸೆಲ್ಫಿ ಕ್ರೇಜ್ ಜೀವಕ್ಕೆ ಸಂಚಕಾರ ತಂದುಕೊಂಡ ಯುವತಿಯರು- ವಿಡಿಯೋ ವೈರಲ್
ಭೋಪಾಲ್: ಸೆಲ್ಫಿ ಕ್ರೇಜ್ ಎಲ್ಲಿಯವರೆಗೆ ಅಂದರೆ, ಜೀವಕ್ಕೆ ಅಪಾಯವನ್ನು ತೊಂದೊಡ್ಡುವ ಮಟ್ಟಕ್ಕೆ ಈಗಿನ ಯುವ ಜನತೆ ಮುಂದಾಗುವ ಹಂತಕ್ಕೆ ತಲುಪಿದೆ. ಅದೇ ರೀತಿಯ ಪ್ರಕರಣ ಇದೀಗ ಮಧ್ಯ ಪ್ರದೇಶದಲ್ಲಿ ನಡೆದಿದ್ದು, ಸೆಲ್ಫಿ ಕ್ಲಿಕ್ಕಿಸಲು ನದಿ ಮಧ್ಯೆ ಹೋದ ಇಬ್ಬರು ಯುವತಿಯರು ಅಲ್ಲೇ ಸಿಲುಕಿ ಜೀವಕ್ಕೆ ಸಂಚಕಾರ ತಂದುಕೊಂಡಿದ್ದಾರೆ.
ಮಧ್ಯ ಪ್ರದೇಶದ ಚಿಂದ್ವಾರ ಜಿಲ್ಲೆಯ ಪೆಂಚ್ ನದಿಯಲ್ಲಿ ಘಟನೆ ನಡೆದಿದ್ದು, ಯುವತಿಯರ ಗುಂಪೊಂದು ಪಿಕ್‍ನಿಕ್‍ಗೆ ಬೆಳ್ಕೇಡಿಗೆ ತೆರಳಿದ್ದು, ಕೊರೊನಾ ವೈರಸ್ ಹಿನ್ನೆಲೆ ಗುಂಪಾಗಿ ಸೇರದಂತೆ ಎಲ್ಲರೂ ಇಬ್ಬಿಬ್ಬರಂತೆ ಬೇರೆ ಆಗಿದ್ದಾರೆ. ಆಗ ಈ ಇಬ್ಬರು ಸೆಲ್ಫಿ ತೆಗೆದುಕೊಳ್ಳಲು ನದಿ ಬಳಿ ತೆರಳಿದ್ದಾರೆ.
ಈ ವೇಳೆ ನದಿಯ ಮಧ್ಯಕ್ಕೆ ಹೋಗಿದ್ದು, ಸೆಲ್ಫಿ ಕ್ಲಿಕ್ಕಿಸುವಷ್ಟರಲ್ಲಿ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬಂದಿದೆ. ಈ ವೇಳೆ ಇಬ್ಬರೂ ಮಧ್ಯದಲ್ಲೇ ಸಿಲುಕಿದ್ದಾರೆ. ತಕ್ಷಣವೇ ಇಬ್ಬರು ಹುಡುಗಿಯರ ಉಳಿದ ಸ್ನೇಹಿತೆಯರು ಪೊಲೀಸ್ ಹಾಗೂ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನದಿ ಮಧ್ಯೆ ಸಿಲುಕಿದ ಯುವತಿಯರನ್ನು ಪೊಲೀಸರು ಹಾಗೂ ಇತರ ಅಧಿಕಾರಿಗಳು ರಭಸದಿಂದ ಹರಿಯುತ್ತಿದ್ದ ನೀರು ದಾಟಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.