LATEST NEWS
ಪ್ರತಿಭಟನೆ – ಪ್ರಧಾನಿ ಮೋದಿ ಭದ್ರತೆಯಲ್ಲಿ ಭಾರೀ ಲೋಪ, ಪ್ಲೈಓವರ್ ಟ್ರಾಫಿಕ್ ನಲ್ಲಿ ಸಿಲುಕಿದ ಪ್ರಧಾನಿ
ಪಂಜಾಬ್ ಜನವರಿ 05: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ಭದ್ರತಾ ಲೋಪವಾಗಿದ್ದು, ಪ್ಲೈಓವರ್ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಇದ್ದ ಕಾರು 15 ರಿಂದ 20 ನಿಮಿಷಗಳ ಕಾಲ ಸಿಕ್ಕಿ ಹಾಕಿಕೊಂಡಿದ್ದು , ಕೊನೆಗೆ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಗಿ ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫಿರೋಜ್‌ಪುರಕ್ಕೆ ಭೇಟಿ ನೀಡಿ ಹಲವಾರು ಅಭಿವೃದ್ದಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಹಾಗೂ ಈ ವೇಳೆ ಜನತೆಯನ್ನುದ್ದೇಶಿಸಿ ಭಾಷಣ ಮಾಡಲು ತೀರ್ಮಾನಿಸಲಾಗಿತ್ತು. ಇಂದು ಪ್ರಧಾನಿಯವರು ಬಟಿಂಡಾಕ್ಕೆ ಬಂದಿಳಿದಿದ್ದರು. ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಫಿರೋಜ್‌ಪುರ ಜಿಲ್ಲೆಯತ್ತ ತೆರಳಿದ್ದರು.
ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳದಲ್ಲಿ ಹೆಲಿಕಾಪ್ಟರ್‌ನಲ್ಲಿ ಮೋದಿ ಆಗಮಿಸಬೇಕಿತ್ತು ಆದರೆ ವಾತಾವರಣ ಸರಿ ಇಲ್ಲದ ಕಾರಣ ಅನಿವಾರ್ಯವಾಗಿ ಕಾರಿನಲ್ಲಿ ಬರಬೇಕಾಯಿತು. ಮೆಮೋರಿಯಲ್‌ನಿಂದ 30 ಕಿ.ಮೀ ದೂರದಲ್ಲಿ ಫ್ಲೈಓವರ್ ಮೇಲೆ ಕಾನ್‌ವಾಯ್ ಬರುತ್ತಿದ್ದಂತೆ ಪ್ರತಿಭಟನಾಕಾರರು ಸುತ್ತುವರೆದರು.
ಈ ಹಿನ್ನಲೆ ಪ್ರಧಾನಿ 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡರು. ಇದು ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ಲೈಓವರ್‌ನಲ್ಲಿ ಸಿಲುಕಿದ್ದರು, ಬಳಿಕ ಬತಿಂಡಾದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ಏರ್‌ಪೋರ್ಟ್‌ಗೆ ತೆರಳಿದರು. ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ಇರುವುದೇ ಈ ವೈಫಲ್ಯಕ್ಕೆ ಕಾರಣ ಎಂದು ಗೃಹ ಸಚಿವಾಲಯ ತಿಳಿಸಿದೆ.