ದಕ್ಷಿಣಕನ್ನಡ ಜಿಲ್ಲೆಯ ಮೂರು ಪ್ರದೇಶಗಳ ಸೀಲ್ ಡೌನ್ ತೆರವು
ಮಂಗಳೂರು, ಎಪ್ರಿಲ್ 28: ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿ ಸೀಲ್ ಡೌನ್ ಆಗಿದ್ದ ದಕ್ಷಿಣಕನ್ನಡ ಮೂರು ಪ್ರದೇಶಗಳಲ್ಲಿ ಹೊಸ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗದ ಕಾರಣ ಈ ಮೂರು ಪ್ರದೇಶಗಳನ್ನು ಸೀಲ್ಡೌನ್ ಮುಕ್ತಗೊಳಿಸಿ ದ.ಕ. ಜಿಲ್ಲಾಧಿಾರಿ ಸಿಂಧೂ ಬಿ.ರೂಪೇಶ್ ಆದೇಶ ಹೊರಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಜಿಪನಡು, ಬೆಳ್ತಂಗಡಿ ತಾಲೂಕಿನ ಕರಾಯ ಮತ್ತು ಸುಳ್ಯದ ಅಜ್ಜಾವರ ಕಂಟೈನ್ ಮೆಂಟ್ ಮುಕ್ತ ವಲಯಗಳಾಗಿವೆ. ಸೀಲ್ ಡೌನ್ ನಿಂದ ಈ ಮೂರು ಪ್ರದೇಶಗಳು ಇನ್ನು ಮುಂದೆ ಹೊರಗೆ ಉಳಿಯಲಿವೆ. ಕಳೆದ 28 ದಿನಗಳಲ್ಲಿ ಯಾವುದೇ ಪಾಸಿಟಿವ್ ಪತ್ತೆಯಾಗದ ಹಿನ್ನೆಲೆಯಲ್ಲಿ ಮತ್ತು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳ ಕ್ವಾರೆಂಟೈನ್ ಮುಕ್ತಾಯವಾದ ಕಾರಣ ಮತ್ತು ಈ ಮೂರು ಪ್ರದೇಶದ ಕೊರೊನಾ ಪಾಸಿಟಿವ್ ರೋಗಿಗಳು ಕೂಡ ಸಂಪೂರ್ಣ ಗುಣಮುಖರಾದ ಕಾರಣ ಈ ಆದೇಶವನ್ನು ನೀಡಲಾಗಿದೆ.
ಮಂಗಳೂರು ತಾಲೂಕಿನ ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆ ಪರಿಸರ , ತೊಕ್ಕೊಟ್ಟು ಜಂಕ್ಷನ್, ಪದವು ಗ್ರಾಮದ ಕಕ್ಕೆಬೆಟ್ಟು , ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ, ಬಿ ಕಸಬಾ ಗ್ರಾಮ, ನರಿಕೊಂಬು ಗ್ರಾಮ, ಪುತ್ತೂರು ತಾಲೂಕಿನ ಸಂಪ್ಯ ಮತ್ತು ಉಪ್ಪಿನಂಗಡಿ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ಗಳಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅಧಿಸೂಚನೆ ಹೊರಡಿಸಿದ್ದಾರೆ. ಪ್ರತಿಯೊಂದು ಝೋನ್ಗೂ ಕಮಾಂಡರ್ಗಳನ್ನು ನೇಮಿಸಲಾಗಿದೆ