LATEST NEWS
ಮಳೆಗಾಲದಲ್ಲಿ ವಿದ್ಯುತ್ ಅಘಾತದಿಂದ ಸಾವನಪ್ಪಿದ್ದರೆ ಮೆಸ್ಕಾಂ ಅಧಿಕಾರಿಗಳೇ ಹೊಣೆ – ಸ್ಪೀಕರ್ ಖಾದರ್ ವಾರ್ನಿಂಗ್
ಮಂಗಳೂರು ಜೂನ್ 30: ಮಳೆಗಾಲದಲ್ಲಿ ವಿದ್ಯುತ್ ಆಘಾತದಿಂದ ಮತ್ತೆ ಜಿಲ್ಲೆಯಲ್ಲಿ ಪ್ರಾಣಹಾನಿ ಸಾವು ನೋವು ಸಂಭವಿಸಿದರೆ ಸಂಬಂಧಪಟ್ಟ ಮೆಸ್ಕಾಂನ ಅಧಿಕಾರಿಗಳೇ ಸಂಪೂರ್ಣ ಜವಾಬ್ದಾರಿ ಅಗಲಿದ್ದಾರೆ. ಆಯಾ ವ್ಯಾಪ್ತಿಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ವಿದ್ಯುತ್ ತಂತಿ ತಗುಲಿ ಜಿಲ್ಲೆಯಲ್ಲಿ ಮೂರು ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ನಗರದಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮಳೆಗಾಲದಲ್ಲಿ ಸಾವು ನೋವು ಪ್ರಾಣ ಹಾನಿ ಸಂಭವಿಸುವ ಡೇಂಜರ್ ಸ್ಪಾಟ್ಗಳನ್ನು ಮೊದಲೇ ಗುರುತಿಸಿ ಅಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಮಾತ್ರವಲ್ಲದೆ ಜನರಿಗೆ ಈ ಬಗ್ಗೆ ಮಾಹಿತಿ ನೀಡುವ ಕಾರ್ಯ ಕೂಡ ಆಗಬೇಕು. ಇದರಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಸೂಚಿಸಿದರು.
ತಂತಿ ಮೇಲೆ ಮರ ಉರುಳುವ ಸಂಭವ, ವಿದ್ಯುತ್ ಕಂಬ ಬೀಳುವ ಸಾಧ್ಯತೆ ಇತ್ಯಾದಿಗಳನ್ನು ಮೊದಲೇ ಗುರುತಿಸಿ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಮೆಸ್ಕಾಂ ಪಿಡಬ್ಲ್ಯೂಡಿ ಮತ್ತು ಅರಣ್ಯ ಇಲಾಖೆಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ವಿದ್ಯುತ್ ತಂತಿಗೆ ಬೀಳುವ ಮರಗಳನ್ನು ತೆರವು ಮಾಡಲು ವಿಳಂಬ ಮಾಡುವುದು ಯಾಕೆ? ಈ ಆಧುನಿಕ ತಂತ್ರಜ್ಞಾನದಲ್ಲಿ ಎಲ್ಲ ರೀತಿಯ ಸಲಕರಣೆಗಳಿದ್ದರೂ ಕೂಡ ಕಾಲಕಾಲಕ್ಕೆ ಇಂಥ ಕೆಲಸಗಳನ್ನು ಯಾಕೆ ಮಾಡುತ್ತಿಲ್ಲ? ಇದರಿಂದಾಗಿಯೇ ಮೊನ್ನೆ ಮೂರು ಸಾವು ಸಂಭವಿಸಿದ್ದು. ಆಯಾ ವ್ಯಾಪ್ತಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಇಂತಹ ಸ್ಪಾಟ್ ಗಳನ್ನು ಗುರುತಿಸಿ ಯುದ್ಧ ಉಪಾದಿಯಲ್ಲಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.