LATEST NEWS
ಕರಾವಳಿಯಲ್ಲಿ ತೀವ್ರಗೊಂಡ ಕಡಲ ಕೊರೆತ
ಕರಾವಳಿಯಲ್ಲಿ ತೀವ್ರಗೊಂಡ ಕಡಲ ಕೊರೆತ
ಮಂಗಳೂರು ಜುಲೈ 17: ಕರಾವಳಿಯಲ್ಲಿ ಮಳೆಯ ಅಬ್ಬರದ ಜೊತೆಗೆ ಸಮುದ್ರ ಅಬ್ಬರ ಕೂಡ ಹೆಚ್ಚಾಗಿದೆ. ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದೆ. ಅಲ್ಲದೆ ಸಮುದ್ರ ತೀರದಲ್ಲಿ ಆಳೆತ್ತರದ ಅಲೆಗಳು ತೀರ ಪ್ರದೇಶಕ್ಕೆ ನುಗ್ಗುತ್ತಿರುವ ಹಿನ್ನಲೆಯಲ್ಲಿ ಕರಾವಳಿಯಲ್ಲಿ ಕಡಲಕೊರೆತ ತೀವ್ರಗೊಂಡಿದೆ.
ಮಂಗಳೂರು ಹೊರವಲಯದ ಉಳ್ಳಾಲ , ಮುಕ್ಕಚ್ಚೇರಿ, ಕೈಕೊ , ಸೋಮೇಶ್ವರ , ಸಸಿಹಿತ್ಲು ಪ್ರದೇಶದಲ್ಲಿ ಕಡಲ ಕೊರೆತ ತೀವ್ರ ಗೊಂಡಿದೆ. ಉಳ್ಳಾಲ ಪ್ರದೇಶದಲ್ಲಿಕಡಲ್ಕೊರೆತ ತಡೆಗೆ ಹಾಕಿದ್ದ ಬೃಹತ್ತ ಗಾತ್ರದ ಬಂಡೆಗಳು ಸಮುದ್ರದ ಪಾಲಾಗಿವೆ. ಉಳ್ಳಾಲ, ಮುಕ್ಕಚ್ಚೇರಿ, ಕೈಕೊ ,ಕಿಲೆರಿಯಾ, ಪ್ರದೇಶದ ಸುಮಾರು 14 ಮನೆಗಳು ಕಡಲ ಆರ್ಭಟಕ್ಕೆ ಧ್ವಂಸಗೊಂಡಿವೆ. ಸುಮಾರು 35 ಕ್ಕೂ ಹೆಚ್ಚು ಮನೆಗಳಿಗೆ ಸಮುದ್ರದ ನೀರು ನುಗ್ಗಿದೆ. ಈ ಹಿನ್ನಲೆಯಲ್ಲಿ ಅಲ್ಲಿಯ ನಿವಾಸಿಗಳನ್ನು ಜಿಲ್ಲಾಡಳಿತ ಸ್ಥಳಾಂತರಿಸಿದೆ.
ಸೋಮೆಶ್ವರ ಹಾಗು ಉಚ್ಚಿಲ ಪ್ರದೇಶದಲ್ಲಿಯೂ ಕಡಲ್ಕೊರೆತ ಮುಂದುವರೆದಿದೆ. ಸಮುದ್ರ ಕಿನಾರೆಯಲ್ಲಿ ಅಪಾಯದಲ್ಲಿರುವ ಮನೆಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗಾಗಿ ಸಮೀಪದಲ್ಲೇ ಇರುವ ಒಂಬತ್ತುಕೆರೆ ಶಾಲೆಯಲ್ಲಿ ತಾತ್ಕಾಲಿಕ ಗಂಜಿ ಕೇಂದ್ರವನ್ನು ತೆರೆಯಲಾಗಿದೆ.