LATEST NEWS
ಸೋಮೇಶ್ವರ ಕಡಲ್ಕೊರೆತ ; ಬಬ್ಬರ್ಯನ ಕಟ್ಟೆ ಭಾಗಶಃ ನೀರುಪಾಲು
ಮಂಗಳೂರು, ಜೂ 23 : ಇತಿಹಾಸ ಪ್ರಸಿದ್ಧ ಸೋಮೇಶ್ವರದ ಸೋಮನಾಥ ದೇವಸ್ಥಾನದ ಪರಿವಾರ ಕ್ಷೇತ್ರಪಾಲಕ ದೈವ ಬಬ್ಬರ್ಯನ ಕಟ್ಟೆ ಕಡಲ್ಕೊರೆತಕ್ಕೆ ಈಡಾಗಿದ್ದು ಭಾಗಶಃ ಕೊಚ್ಚಿ ಹೋಗಿದೆ. ಸಮುದ್ರದ ಅಲೆಗಳು ಅಬ್ಬರಿಸುತ್ತಾ ದೇವಸ್ಥಾನದ ಹಿಂಭಾಗಕ್ಕೆ ಬಂದು ಅಪ್ಪಳಿಸುತ್ತಿದೆ.
ಸೋಮೇಶ್ವರ ಉಚ್ಚಿಲ ಪ್ರದೇಶಗಳಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಬ್ರೇಕ್ ವಾಟರ್ ಕಾಮಗಾರಿಯಿಂದಾಗಿ ಸತತ ಮೂರು ವರ್ಷಗಳಿಂದಲೂ ಮಳೆಗಾಲದಲ್ಲಿ ಈ ಭಾಗದಲ್ಲಿ ಕಡಲು ಅಬ್ಬರಿಸುತ್ತಿದೆ. ಕಳೆದ ಬಾರಿ ಸೋಮೇಶ್ವರ ದೇವಸ್ಥಾನದಿಂದ ಬೀಚ್ ಸಂಪಕರ್ದ ಮೆಟ್ಟಿಲುಗಳು ಸಮುದ್ರ ಪಾಲಾಗಿವೆ. ಈ ಬಾರಿ ಮತ್ತೆ ಕಡಲಬ್ಬರ ಮುಂದುವರಿದಿದ್ದು ಬಬ್ಬರ್ಯನ ಕಟ್ಟೆಯು ಭಾಗಶಃ ಕೊಚ್ಚಿ ಹೋಗಿದೆ.
ಉಚ್ಚಿಲ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ಮೇರೆಗೆ ಜಿಲ್ಲಾಡಳಿತದಿಂದ ತಾತ್ಕಾಲಿಕ ತಡೆಗೋಡೆಯಾಗಿ ಕಲ್ಲು ಹಾಕುವ ಕಾಮಗಾರಿ ಆರಂಭಗೊಂಡಿದೆ. ಎಷ್ಟೇ ಕಲ್ಲು ಹಾಕಿದರೂ ಶಾಶ್ವತ ಬ್ರೇಕ್ ವಾಟರ್ ಕಾಮಗಾರಿ ಸಂಪೂರ್ಣಗೊಳ್ಳದೆ ಇರುವುದರಿಂದ ಸೋಮೇಶ್ವರ, ಉಚ್ಚಿಲ ಪ್ರದೇಶದ ತೀರವಾಸಿಗಳು ಪ್ರತಿ ಬಾರಿಯೂ ಮಳೆಗಾಲದಲ್ಲಿ ಸಮಸ್ಯೆಯನ್ನು ಎದುರಿಸುವಂತಾಗಿದೆ.