LATEST NEWS
ನಿರಂತರವಾಗಿ ತಡೆಗೋಡೆಗಳು ಬಿದ್ದು ಜೀವಹಾನಿಯಾಗುತ್ತಿದ್ದರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ವಿಫಲ: ಎಸ್‌ಡಿಪಿಐ

ಮಂಗಳೂರು ಜುಲೈ 25 : ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ತಡೆಗೋಡೆಗಳು ಕುಸಿದು ಬಿದ್ದು ಜೀವಹಾನಿಗಳು ಸಂಭವಿಸುತ್ತಿದೆ ಆದರೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಂಪೂರ್ಣ ವಿಫಲವಾಗಿದೆ.ಅದರ ಮುಂದುವರಿದ ಭಾಗವಾಗಿ ನಿನ್ನೆ ತಡರಾತ್ರಿ ಜೋಕಟ್ಟೆಯಲ್ಲಿ ಮನೆಯ ಮೇಲೆ ತಡೆಗೋಡೆ ಬಿದ್ದು ಅಪ್ರಾಪ್ತ ದಲಿತ ಬಾಲಕನೋರ್ವ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಉಳ್ಳಾಲ ತಾಲೂಕಿನ ಕುತ್ತಾರು ಸಮೀಪ ತಡೆಗೋಡೆ ಬಿದ್ದು ಒಂದೇ ಕುಟುಂಬದ ನಾಲ್ಕು ಸದಸ್ಯರು ಮೃತಪಟ್ಟ ಬಳಿಕವೂ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿದೆ.ಅದರ ನಂತರ ಅನೇಕ ಕಡೆ ತಡೆಗೋಡೆ ಕುಸಿದಿದೆ,ನಿನ್ನೆ ತಡರಾತ್ರಿ ಜೋಕಟ್ಟೆಯಲ್ಲಿ ತಡೆಗೋಡೆ ಕುಸಿದು ಒಬ್ಬನ ಜೀವಹಾನಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಮಳೆ ಬರುವ ಮುನ್ಸೂಚನೆ ಇರುವಾಗ ಕೇವಲ ಶಾಲೆಗೆ ರಜೆ ಕೊಟ್ಟ ಮಾತ್ರಕ್ಕೆ ಜಿಲ್ಲಾಡಳಿತದ ಕೆಲಸ ಮುಗಿಯುವುದಿಲ್ಲ,ಇಂತಹ ಅಪಾಯಕಾರಿ ತಡೆಗೋಡೆ,ಬರೆ ಜರಿತ ಸಾಧ್ಯ ಇರುವ ಬೆಟ್ಟ ಗುಡ್ಡ ಪ್ರದೇಶಗಳನ್ನು ಗುರುತಿಸಿ ಅಲ್ಲಿಂದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡುವಂತಹ ಹಾಗೂ ಅವರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡುವ ಕೆಲಸ ಮಾಡಬೇಕು. ಅದೇ ರೀತಿ ಇಂತಹ ಅಪಾಯಕಾರಿ ಪ್ರದೇಶ ಎಲ್ಲೆಲ್ಲಾ ಇವೆ ಎಂದು ಜಿಲ್ಲೆಯ ಎಲ್ಲಾ ಸ್ಥಳೀಯಾಡಳಿತ ಗಳಿಗೆ ಅಥವಾ ಇದಕ್ಕೆಂದೇ ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ವಿಶೇಷ ತಂಡಗಳಿಗೆ ನಿರ್ದೇಶನ ನೀಡಿ ಪತ್ತೆ ಹಚ್ಚಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಹಾಗೂ ಜೋಕಟ್ಟೆಯಲ್ಲಿ ತಡೆಗೋಡೆ ಕುಸಿತದಿಂದ ಮೃತಪಟ್ಟ ಬಾಲಕ ದಲಿತ ಸಮುದಾಯಕ್ಕೆ ಸೇರಿದ ಬಡ ಕುಟುಂಬವಾಗಿದೆ, ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಗರಿಷ್ಟ ಪರಿಹಾರವನ್ನು ಸರಕಾರ ಒದಗಿಸಬೇಕು ಮತ್ತು ತಡೆಗೋಡೆ ಕುಸಿತದಿಂದ ಮನೆ ಭಾಗಶಃ ಹಾನಿಯಾಗಿರುವುದರಿಂದ ಪುನರ್ವಸತಿ ಕಲ್ಪಿಸಬೇಕೆಂದು ಜಮಾಲ್ ಜೋಕಟ್ಟೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.