LATEST NEWS
ಬೋಳಿಯಾರು ಪ್ರಕರಣದಲ್ಲಿ ಸ್ಥಳೀಯ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಅಧಿಕಾರಿಗಳು ಸಂಘಪರಿವಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ – ಎಸ್ ಡಿಪಿಐ

ಮಂಗಳೂರು ಜೂನ್ 24: ಬೋಳಿಯಾರು ಪ್ರಕರಣದಲ್ಲಿ ಕೇವಲ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿ ತಡರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಅಮಾಯಕರ ಬಂಧನ ನಡೆಸುತ್ತಿದ್ದಾರೆ. ಈವರೆಗೆ 15 ಮುಸ್ಲಿಮರನ್ನು ಬಂಧಿಸಿದರೂ ಒಬ್ಬ ಸಂಘಪರಿವಾರದ ನಾಯಕನನ್ನು ಬಂಧಿಸಿಲ್ಲ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಳ್ಳಾಲ ಪ್ರೆಸ್ ಕ್ಲಬ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೋಳಿಯಾರು ಪ್ರಕರಣದಲ್ಲಿ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ,ಗೃಹಸಚಿವರು ಹಾಗೂ ಪೊಲೀಸ್ ಕಮೀಷನರ್ ಸಂಘಪರಿವಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಸೀದಿ ಮುಂದೆ ಬಂದು ಸಂಘಪರಿವಾರದ ಕಾರ್ಯಕರ್ತರು ಸಮುದಾಯವನ್ನು ಪ್ರಚೋದಿಸುವ ರೀತಿಯಲ್ಲಿ ಘೋಷಣೆಗಳನ್ನು ಕೂಗಿ, ಡಿ.ಜೆ ಡ್ಯಾನ್ಸ್ ನಡಿಸಿದ್ದಾರೆ. ಬಿಜೆಪಿ- ಸಂಘಪರಿವಾರ ಒಂದು ಸಮಯದಾಯವನ್ನು ಕೆಣಕಿಸುವ ರೀತಿಯಲ್ಲಿ ಕೋಮುಗಲಭೆಗೆ ಹುನ್ನಾರ ನಡೆಸಿಯೇ ವಿಜಯೋತ್ಸವ ನಡೆಸಿದೆ. ಆದರೆ ಪ್ರಚೋದಿಸಿದವರ ಮೇಲೆ 153(A) ಕಳಂ ನಡಿ ಪ್ರಕರಣ ದಾಖಲಿಸಿದ್ದರೂ, ಪೊಲೀಸರು ಯಾರನ್ನೂ ಬಂಧಿಸದೆ ಕೇವಲ ಬೋಳಿಯಾರಿನಲ್ಲಿರುವ ಮುಸ್ಲಿಂ ಮನೆಗಳಿಗೆ ಮನೆಗಳಿಗೆ ದಾಳಿ ನಡಿಸಿ ಈವರೆಗೆ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಮುಸ್ಲಿಂ ಶಾಸಕನಿರುವ ಕ್ಷೇತ್ರದಲ್ಲಿ ಪೊಲೀಸರು ಉತ್ತರ ಪ್ರದೇಶ, ಬಿಹಾರ ಮಾದರಿಯಲ್ಲಿ ಮುಸ್ಲಿಮರ ಮನೆಗಳಿಗೆ ದಾಳಿ ನಡೆಸಲಾಗುತ್ತಿದೆ. ಅಲ್ಲಿ ಯುವಕರು ಸಿಗದೇ ಇದ್ದಲ್ಲಿ ವೃದ್ದೆ ತಾಯಿ, ಮಕ್ಕಳು, ರೋಗಿ ಮಹಿಳೆಯರನ್ನೂ ಠಾಣೆಗೆ ತಂದು ಎರಡು ದಿನ ಎರಡು ರಾತ್ರಿ ಕುಳಿತುಕೊಳ್ಳುವಂತೆ ಇಲಾಖೆ ಮಾಡಿದೆ. ಶೇ.85 ಮುಸಲ್ಮಾನರ ಮತದಿಂದಲೇ ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಸಿದ್ಧರಾಮಯ್ಯ ಸರಕಾರ ಹಳೆಯ ಬೊಮ್ಮಾಯಿ ಸರಕಾರದಂತೆ ಕಾರ್ಯಾಚರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.