ವಸತಿ ಸಮಸ್ಯೆಗಳನ್ನು ಎಸ್‌ಡಿಪಿಐ ಪಕ್ಷ ಆದ್ಯತೆಯಲ್ಲಿ ಪರಿಹರಿಸಲಿದೆ – ಮಹಮ್ಮದ್ ಇಲಿಯಾಸ್ ತುಂಬೆ

ಮಂಗಳೂರು ಮಾರ್ಚ್ 31: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ದಲ್ಲಿ 25 ಶೇಕಡ ಬಡವರು ಮತ್ತು ಮದ್ಯಮ ವರ್ಗದವರು ಬಾಡಿಗೆ ಮನೆ ಮತ್ತು ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ. ಈ ಜನರಿಗೆ ಸ್ವಂತ ಮನೆಗಾಗಿ ನಿವೇಶನ ಮತ್ತು ಸರಕಾರದ ಧನ ಸಹಾಯ ನೀಡಿ ಸ್ವಂತ ಮನೆಯ ವ್ಯವಸ್ತೆಗಾಗಿ ಎಸ್‌ಡಿಪಿಐ ಪಕ್ಷ ಆದ್ಯತೆಯಲ್ಲಿ ಪ್ರಯತ್ನಿಸಲಿದೆ. ಸಾವಿರಾರು ಎಕರೆ ಸರಕಾರಿ ಭೂಮಿಗಳನ್ನು ಶ್ರೀಮಂತರು ಮತ್ತು ಕಂಪನಿಗಳು ಕಬಲಿಸಿದೆ. ಆ ಭೂಮಿಗಳನ್ನು ಭೂ ರಹಿತರಿಗೆ ಹಂಚಿಕೆ ಮಾಡಲಾಗುವುದು. ನೆಲ, ಜಲ, ಕಾಡು, ಪರಿಸರ ಸಂರಕ್ಷಣೆಗಾಗಿ ನಿರಂತರ ಎಸ್‌ಡಿಪಿಐ ಹೋರಾಡುತ್ತಿದೆ ಎಂದು ಲೋಕಸಭಾ ಅಭ್ಯರ್ಥಿ ಮಹಮ್ಮದ್ ಇಲಿಯಾಸ್ ರವರು ತಿಳಿಸಿದ್ದಾರೆ.

ಮಂಗಳೂರು ಉತ್ತರ ಮತ್ತು ಮೂಡಬಿದಿರೆ ವಿಧಾನ ಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ವಿವಿದೆಡೆ ಮತದಾರರೊಂದಿಗೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಡಿಸಿದರು. ನಾನು ಬಡ ಕುಟುಂಬದಿಂದ ಬಂದವನು. ಈಗಲೂ ಬಡವನಾಗಿಯೇ ಇದ್ದೇನೆ. ನಿರಂತರ 3 ದಶಕಗಳಿಂದ ಬಡವರು, ಮದ್ಯಮ ವರ್ಗದವರು ಮತ್ತು ದಮನಿತರ ಪರವಾಗಿ ರಾಷ್ಟ್ರಮಟ್ಟದಲ್ಲಿ ಹೋರಾಡುತ್ತಿದ್ದೇನೆ ಎಂದರು.

ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿಯೊಂದಿಗೆ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ, ರಾಜ್ಯ ಕಾರ್ಯದರ್ಶಿಯಾದ ಅಕ್ರಮ್ ಹಸನ್, ಕಾರ್ಮಿಕ ಮುಖಂಡರಾದ ಜಲೀಲ್ ಕೃಷ್ಣಾಪುರ, ಜಿಲ್ಲಾ ನಾಯಕರಾದ ಅಬೂಬಕ್ಕರ್ ಕುಲಾಯಿ, ಎಸ್‌ಡಿಪಿಐ ಕಾರ್ಪೋರೇಟರ್ ಅಯಾಝ್, ಜಿಲ್ಲೆ ಮತ್ತು ಅಸೆಂಬ್ಲಿ ಕಾರ್ಯಕರ್ತರು, ಪಕ್ಷದ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.