LATEST NEWS
ಮಣಿಪಾಲ -ಎದೆನೋವು ಕಾಣಿಸಿಕೊಂಡ ಕೂಡಲೇ ವಾಹನ ನಿಲ್ಲಿಸಿ ಮಕ್ಕಳ ಜೀವ ಉಳಿಸಿದ ಚಾಲಕ ಹೃದಯಾಘಾತಕ್ಕೆ ಬಲಿ

ಮಣಿಪಾಲ ಅಗಸ್ಟ್ 01: ಶಾಲಾ ಮಕ್ಕಳನ್ನು ವಾಹನದಲ್ಲಿ ಕರೆದುಕೊಂಡು ಹೋಗುತ್ತಿರುವ ವೇಳೆ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದ್ದು, ವಾಹನ ನಿಲ್ಲಿಸಿ ಆಸ್ಪತ್ರೆಗೆ ತೆರಳುವ ವೇಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂಭವಿಸಿತು. ಕಾರ್ಕಳ ನೀರೆ ಬೈಲೂರಿನ ನಿವಾಸಿ ಮೊಯ್ದಿನ್ ಬಾವ (65) ಮೃತಪಟ್ಟವರು.
ಮಣಿಪಾಲದ ಪ್ರಗತಿನಗರದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಕಂಡು ವಾಹನ ನಿಲ್ಲಿಸಿದ ಮೊಯ್ದಿನ್ ಬಾವ ಎದೆನೋವಿನ ವಿಚಾರ ಹೇಳಿಕೊಂಡಿದ್ದಾರೆ. ತಕ್ಷಣ ಅವರು ತಮ್ಮ ಆ್ಯಂಬುಲೆನ್ಸ್ನಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪರೀಕ್ಷಿಸಿ ಚಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ನಿತ್ಯಾನಂದ ಒಳಕಾಡು ಅವರು ಮಾತನಾಡಿ, “ಟಿ.ಟಿ. ವಾಹನ ಚಾಲಕ ನನ್ನನ್ನು ಕಂಡು ವಾಹನ ನಿಲ್ಲಿಸಿದರು. ನಾನು ಹತ್ತಿರ ಹೋಗಿ ವಿಚಾರಿಸಿದೆ. ಆಗ ಅವರು ನನಗೆ ತೀವ್ರ ಎದೆನೋವು ಆಗುತ್ತಿದೆ ಎಂದು ಹೇಳಿದ್ದಾರೆ. ತಕ್ಷಣ ನನ್ನ ಆ್ಯಂಬುಲೆನ್ಸ್ನಲ್ಲಿ ನಗರದ ಸರಕಾರಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದೆ. ಅಲ್ಲಿ ವೈದ್ಯರು ಪರೀಕ್ಷಿಸಿ ಚಾಲಕ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ನನ್ನನ್ನು ನೋಡಿ ಅವರು ವಾಹನವನ್ನು ನಿಲ್ಲಿಸಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ. ವಾಹನದಲ್ಲಿ ಮಣಿಪಾಲದ ಕೇಂದ್ರೀಯ ವಿದ್ಯಾಲಯಕ್ಕೆ ಹೋಗುವ ಹಲವು ಮಕ್ಕಳಿದ್ದರು” ಎಂದು ಹೇಳಿದರು.