LATEST NEWS
ಮಂಗಳೂರು – 110.40 ಕೋಟಿ ಸಾರ್ವಕಾಲಿಕ ದಾಖಲೆ ಲಾಭ ಗಳಿಸಿದ ಎಸ್ ಸಿಡಿಸಿಸಿ ಬ್ಯಾಂಕ್

ಮಂಗಳೂರು ಎಪ್ರಿಲ್ 03: ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಅಂತ್ಯದಲ್ಲಿ 110.40 ಕೋಟಿ ಸಾರ್ವಕಾಲಿಕ ದಾಖಲೆಯ ಲಾಭವನ್ನು ಎಸ್ ಸಿ ಡಿಸಿಸಿ ಬ್ಯಾಂಕ್ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಹೇಳಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಕಳೆದ ವರ್ಷ ಬ್ಯಾಂಕ್ ₹79.09 ಕೋಟಿ ಲಾಭ ಗಳಿಸಿತ್ತು. ಬ್ಯಾಂಕ್‌ನ ಅನುತ್ಪಾದಕ ಆಸ್ತಿ ಪ್ರಮಾಣವು ಶೇ 3.52ರಿಂದ ಶೇ 2.71ಕ್ಕೆ ಇಳಿಕೆಯಾಗಿದೆ ಎಂದರು.
ಒಟ್ಟು ₹17,366.68 ಕೋಟಿ ವ್ಯವಹಾರ ನಡೆಸಿದ್ದು, ಕಳೆದ ವರ್ಷಕ್ಕಿಂತ ಶೇ 11.72ರಷ್ಟು ಹೆಚ್ಚಳವಾಗಿದೆ. 2025-26ನೇ ಸಾಲಿನಲ್ಲಿ ₹19,250 ಕೋಟಿ ವ್ಯವಹಾರ ನಡೆಸುವ ಗುರಿ ಹೊಂದಲಾಗಿದೆ. ಕೃಷಿಕರಿಗಾಗಿ ಇರುವ ರಾಜ್ಯದ 22 ಸಕ್ಕರೆ ಕಾರ್ಖಾನೆಗಳಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಸಾಲ ನೀಡಿದೆ. ಸತತ 30 ವರ್ಷಗಳಿಂದ ಕೃಷಿ ಸಾಲ ಮರುಪಾವತಿಯಲ್ಲಿ ಶೇ. 100ರ ಸಾಧನೆ ಮಾಡಿದ್ದು, ರಾಷ್ಟ್ರೀಯ ದಾಖಲೆಯಾಗಿದೆ ಎಂದು ಹೇಳಿದರು.
ಗ್ರಾಹಕರಿಗೆ ತ್ವರಿತವಾಗಿ ಹಣ ಪಾವತಿಸಲು ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಯುನಿಫೈಡ್ ಪೇಮೆಂಟ್ಸ್ ಸಿಸ್ಟ್ಂ (ಯುಪಿಐ) ಜಾರಿಗೊಳಿಸಲಾಗುವುದು. ಇದರಿಂದ ಯುಪಿಐ ಸೇವೆಗಳ ಪಾವತಿ ವಿಧಾನ ಬಳಸಬಹುದು. ಮುಂದಿನ ಅವಧಿಯಲ್ಲಿ 10 ಹೊಸ ಶಾಖೆ ತೆರೆಯಲು ಯೋಚಿಸಲಾಗಿದೆ ಎಂದು ಹೇಳಿದರು.

ಐಎಂಪಿಎಸ್‌ಗೆ ಸಿದ್ಧತೆ ಬರುವ ದಿನಗಳಲ್ಲಿ ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟ್ಂ ಯೋಜನೆ (ಐಎಂಪಿಎಸ್) ಜಾರಿಗೊಳಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಈ ಯೋಜನೆಯಿಂದ ಗ್ರಾಹಕರು ಮೊಬೈಲ್ ಫೋನ್ ಮೂಲಕ ತಮ್ಮ ಇತರ ಬ್ಯಾಂಕ್ ಗಳಿಗೆ ಹಣ ವರ್ಗಾವಣೆ ಮಾಡಬಹುದು ಎಂದರು.