FILM
ರಾಜ್ಯ ಪ್ರಶಸ್ತಿ ನಿರಾಕರಿಸಿ ನಟ ಸುದೀಪ್ – ಪ್ರಶಸ್ತಿ ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ ಎಂದ ಕಿಚ್ಚ
ಬೆಂಗಳೂರು ಜನವರಿ 23: ರಾಜ್ಯ ಸರಕಾರ ನೀಡಿದ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಟ ಸುದೀಪ್ ನಿರಕಾರಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ನಾನು ಪ್ರಶಸ್ತಿ ಸ್ವೀಕರಿಸುವುದನ್ನು ನಿಲ್ಲಿಸಿದ್ದೆ ಎಂದು ಪ್ರಶಸ್ತಿ ನಿರಾಕರಿಸಿದಕ್ಕೆ ಕಾರಣ ತಿಳಿಸಿದ್ದಾರೆ.
2019ರಲ್ಲಿ ತೆರೆಕಂಡ ಸಿನಿಮಾಗಳಿಗೆ ಈಗ ರಾಜ್ಯ ಪ್ರಶಸ್ತಿ ಘೋಷಣೆ ಆಗಿದೆ. ಈ ಪಟ್ಟಿಯಲ್ಲಿ ಸುದೀಪ್ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಚ್ಚರಿ ಏನೆಂದರೆ, ಸುದೀಪ್ ಅವರಿಗೆ ಪ್ರಶಸ್ತಿ ಸ್ವೀಕರಿಸಲು ಇಷ್ಟವಿಲ್ಲ. ‘ಪೈಲ್ವಾನ್’ ಸಿನಿಮಾದಲ್ಲಿನ ತಮ್ಮ ನಟನೆಯನ್ನು ಗುರುತಿಸಿದ್ದಕ್ಕಾಗಿ ಅವರು ಜ್ಯೂರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿದಿದ್ದಾರೆ. ಆದರೆ ತಮ್ಮ ಬದಲು ಬೇರೆ ಕಲಾವಿದರಿಗೆ ಈ ಪ್ರಶಸ್ತಿ ಸಲ್ಲಬೇಕು ಎಂದು ಸುದೀಪ್ ಹೇಳಿದ್ದಾರೆ. ಈ ಬಗ್ಗೆ ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ ಮತ್ತು ಈ ಗೌರವಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆದಾಗ್ಯೂ, ನಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು ನಾನು ನಿರ್ಧರಿಸಿದ್ದೇನೆ. ಅದಕ್ಕೆ ವಿವಿಧ ವೈಯಕ್ತಿಕ ಕಾರಣಗಳಿವೆ.’ ‘ಈ ಕಲೆಗಾಗಿ ತಮ್ಮ ಹೃದಯವನ್ನು ಅರ್ಪಿಸಿದ ಅನೇಕ ಸಮರ್ಥ ನಟರು ಇದ್ದಾರೆ. ನನಗಿಂತಲೂ ಹೆಚ್ಚಾಗಿ ಅವರಿಗೆ ಈ ಗೌರವ ಸಲ್ಲಬೇಕು. ಅವರಲ್ಲಿ ಒಬ್ಬರು ಈ ಗೌರವ ಪಡೆದರೆ ನನಗೆ ಹೆಚ್ಚು ಖುಷಿ ಆಗುತ್ತದೆ. ಜನರನ್ನು ರಂಜಿಸಬೇಕು ಎಂಬ ನನ್ನ ಕೆಲಸದಲ್ಲಿ ಪ್ರಶಸ್ತಿಗಳ ನಿರೀಕ್ಷೆ ಇಲ್ಲ. ಜ್ಯೂರಿಗಳು ನನ್ನನ್ನು ಗುರುತಿಸಿರುವುದು ನನಗೆ ಇನ್ನಷ್ಟು ಉತ್ತೇಜನ ನೀಡಿದೆ.’ ‘ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಜ್ಯೂರಿಗಳಿಗೆ ನಾನು ಚಿರಋಣಿ. ಈ ಮನ್ನಣೆಯೇ ನಿಜವಾದ ಪ್ರಶಸ್ತಿ. ನನ್ನ ನಿರ್ಧಾರದಿಂದ ನಿರಾಸೆ ಆಗಿದ್ದರೆ ಜ್ಯೂರಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನ್ನ ನಿರ್ಧಾರವನ್ನು ನೀವು ಗೌರವಿಸುತ್ತೀರಿ ಮತ್ತು ನನ್ನನ್ನು ಬೆಂಬಲಿಸುತ್ತೀರಿ ಎಂಬ ನಂಬಿಕೆ ನನಗೆ ಇದೆ. ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರ ಗೌರವಾನ್ವಿತ ಸದಸ್ಯರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.’