LATEST NEWS
ಉಸ್ತುವಾರಿ ಸಚಿವರ ಕ್ಲಾಸ್ ಬಳಿಕ – ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ

ಮಂಗಳೂರು ಫೆಬ್ರವರಿ 19: ಅಕ್ರಮ ಮರಳುಗಾರಿಕೆ ಬಗ್ಗೆ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳ ಚಳಿ ಬಿಡಿಸಿದ ಬಳಿಕ ಇದೀಗ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದಾರೆ.
ನೇತ್ರಾವತಿ ನದಿ ತೀರ, ಫಲ್ಗುಣಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಸಹಿತ ಮರಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಸೋಮವಾರ ರಾತ್ರಿ 9:30ರ ವೇಳೆ ಕಣ್ಣೂರು ಮಸೀದಿ ಹಿಂಭಾಗದ ನೇತ್ರಾವತಿ ನದಿ ತೀರದಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ದೋಣಿಯ ಮೂಲಕ ತಂದು ಲಾರಿಗಳಿಗೆ ಲೋಡ್ ಮಾಡುತ್ತಿದ್ದ ವೇಳೆ ಕಂಕನಾಡಿ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಜಲ್ಪಾದೆಯ ಫಲ್ಗುಣಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಮೂವರನ್ನು ಕಾವೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯಂತೆ ದಾಳಿ ಸೋಮವಾರ ರಾತ್ರಿ 9.30ರ ವೇಳೆಗೆ ದಾಳಿ ನಡೆಸಿದ್ದು, ಈ ವೇಳೆ ಆರೋಪಿಗಳು ತಪ್ಪಿಸಿ ಕೊಳ್ಳಲು ಯತ್ನಿಸಿದ್ದಾರೆ. ಅವರನ್ನು ಹಿಡಿದು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದ್ಯಪಾಡಿ ಗ್ರಾಮದ ದೈವಂಗಳ ಗುಡ್ಡೆ ಎಂಬಲ್ಲಿ ಫಲ್ಗುಣಿ ನದಿ ಪಾತ್ರದಲ್ಲಿ ಶೆಡ್ ನಿರ್ಮಿಸಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಗಣಿ ಇಲಾಖೆ ಅಧಿಕಾರಿಗಳು ಮತ್ತು ಉಪ ತಹಶೀಲ್ದಾರರ ನೇತೃತ್ವದ ತಂಡ ದಾಳಿ ನಡೆಸಿದೆ. ದಾಳಿ ವೇಳೆ ಮರಳುಗಾರಿಕೆ ನಡೆಸುತ್ತಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. 6 ಕಬ್ಬಿಣದ ದೋಣಿಗಳ ಮೂಲಕ ಮರಳುಗಾರಿಕೆ ನಡೆಸಿರುವುದು ಕಂಡು ಬಂದಿದೆ. 13 ಮೆಟ್ರಿಕ್ ಟನ್ ಮರಳು ಶೇಖರಿಸಲಾಗಿತ್ತು. ವಶಕ್ಕೆ ಪಡೆಯಲಾದ ಮರಳಿನ ಮೌಲ್ಯ 9,100 ರೂ. ಮತ್ತು ದೋಣಿಗಳ ಮೌಲ್ಯ 4,50,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.