LATEST NEWS
ಸಿಆರ್ ಝೆಡ್ ವ್ಯಾಪ್ತಿಯ ಮರಳಿಗೆ ಅನುಮತಿ

ಸಿಆರ್ ಝೆಡ್ ವ್ಯಾಪ್ತಿಯ ಮರಳಿಗೆ ಅನುಮತಿ
ಉಡುಪಿ ಅಕ್ಟೋಬರ್ 23: ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಗೊಳಪಡುವ (ಸಿಆರ್‌ಝೆಡ್) ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕುಗಳಲ್ಲಿ ಮರಳುಗಾರಿಕೆ ನಡೆಸಲು ಕೊನೆಗೂ ಅನುಮತಿ ಸಿಕ್ಕಿದೆ.
ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ತೀವ್ರವಾಗಿದ್ದರಿಂದ ಜಿಲ್ಲಾಡಳಿತವು ಸಿಆರ್‌ಝೆಡ್ ವ್ಯಾಪ್ತಿಯಲ್ಲಿರುವ ಮರಳು ದಿಬ್ಬಗಳನ್ನು ಗುರುತಿಸಿ, ಮರಳು ತೆಗೆಯಲು ಅನುಮತಿ ನೀಡುವಂತೆ ಈಚೆಗೆ ಕರ್ನಾಟಕ ರಾಜ್ಯ ಕರಾವಳಿ ವಲಯ, ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು.

ಜಿಲ್ಲಾಡಳಿತದ ಮನವಿಗೆ ಒಪ್ಪಿಗೆ ದೊರೆತಿದ್ದು, ನಿಯಮಗಳಿಗೆ ಬದ್ಧವಾಗಿ ಮರಳು ದಿಬ್ಬಗಳನ್ನು ತೆರವುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾಹಿತಿ ನೀಡಿದರು.
ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕುಗಳಲ್ಲಿ 9 ಮರಳು ದಿಬ್ಬಗಳನ್ನು ಗುರುತಿಸಿ ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿತ್ತು. ಅದರಲ್ಲಿ 7 ದಿಬ್ಬಗಳ ತೆರವಿಗೆ ಮಾತ್ರ ಒಪ್ಪಿಗೆ ಸಿಕ್ಕಿದೆ. ಯಾವ ಜಾಗದಲ್ಲಿ ಮರಳು ತೆಗೆಯಬಹುದು ಎಂಬ ವಿವರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಯ ನಾಮಫಲಕದಲ್ಲಿ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
2011ಕ್ಕಿಂತ ಹಿಂದೆ ಮರಳು ತೆಗೆಯಲು ಅರ್ಹ ಪರವಾನಗಿ ಹೊಂದಿರುವವರ ಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ. ಅಕ್ಟೋಬರ್ 27ರ ಸಂಜೆ 5ರವರೆಗೆ ಅರ್ಜಿ ಹಾಕಲು ಸಮಯ ನೀಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಡಿಸಿ ಹೇಳಿದರು.
ಪರವಾನಗಿ ಪಡೆಯಲು ಸರ್ಕಾರ ನಿಗಧಿಪಡಿಸಿರುವ ಹಣ ಪಾವತಿಸಬೇಕು. ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು. ಷರತ್ತುಗಳಿಗೆ ಒಪ್ಪಿಗೆ ನೀಡಬೇಕು. ಇವೆಲ್ಲವನ್ನು ಪರಿಗಣಿಸಿ ಅರ್ಹರಿಗೆ ಮಾತ್ರ ಪರ್ಮಿಟ್ ನೀಡಲಾಗುವುದು. ನಾಳೆ ಅರ್ಜಿ ಹಾಕಿದರೆ, ನಾಳೆಯೇ ಪರವಾನಗಿ ನೀಡುತ್ತೇವೆ. ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಅಕ್ರಮವಾಗಿ ಎಲ್ಲೆಂರದಲ್ಲಿ ಮರಳು ತೆಗೆಯಲು ಅವಕಾಶವಿಲ್ಲ. ಜಿಪಿಎಸ್ ನೆರವಿನಿಂದ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಜಿಯೊ ಫೆನ್ಸಿಂಗ್ ಮೂಲಕ ಮರಳು ದಿಬ್ಬಗಳನ್ನು ಗುರುತಿಸಲಾಗಿದೆ. ಪರವಾನಗಿದಾರರು ಜಿಲ್ಲಾಡಳಿತ ಗುರುತಿಸಿರುವ ಜಾಗದಲ್ಲಿ ಮಾತ್ರ ಮರಳು ತೆಗೆಯಬೇಕು. ಒಂದು ಮೀಟರ್ ಆಳದವರೆಗೂ ಮಾತ್ರ ಮರಳು ತೆಗೆಯಲು ಅವಕಾಶವಿದೆ. ಯಾರೂ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲೂ ಮರಳು ತೆಗೆಯಲು ಟೆಂಡರ್ ಕರೆಯಲಾಗಿದ್ದು, ಬುಧವಾರ ಕೊನೆಯ ದಿನ. ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಮರಳುಗಾರಿಕೆ ಆರಂಭವಾಗಲಿದೆ. ಈ ಭಾಗದಲ್ಲಿ ದೊರೆಯುವ ಮರಳು ಸಂಪೂರ್ಣವಾಗಿ ಸರ್ಕಾರಿ ಕಾಮಗಾರಿಗಳಿಗೆ ಮೀಸಲಾಗಿದೆ. ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳು ಹಾಗೂ ಸರ್ಕಾರದ ವಸತಿ ಯೋಜನೆಗಳಿಗೆ ಈ ಮರಳನ್ನು ಬಳಸಿಕೊಳ್ಳಲಾಗುವುದು ಎಂದರು.