Connect with us

LATEST NEWS

ಮರಳು ಮಾಫಿಯಾಕ್ಕೆ ಬಲಿಯಾದರೇ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್….?

ಮರಳು ಮಾಫಿಯಾಕ್ಕೆ ಬಲಿಯಾದರೇ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್….?

ಮಂಗಳೂರು ಸೆಪ್ಟೆಂಬರ್ 6 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕುತೂಹಲ ಮೂಡಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ರಾಜೀನಾಮೆ ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಒಂದು ವಾರದ ರಜೆ ಪಡೆದುಕೊಂಡಿದ್ದ ಜಿಲ್ಲಾಧಿಕಾರಿ ಇಂದು ಏಕಾಏಕಿ ತಮ್ಮ ರಾಜೀನಾಮೆ ಪತ್ರವನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ.

ಜಿಲ್ಲೆಯಲ್ಲಿರುವ ಮರಳು ಮಾಫಿಯಾ, ರಾಜಕೀಯ ಒತ್ತಡಕ್ಕೆ ಸಿಲುಕಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದಾರೆ ಎನ್ನುವ ಚರ್ಚೆ ಅವರ ಆಪ್ತ ವಲಯದಿಂದಲೇ ಕೇಳಿ ಬರಲಾರಂಭಿಸಿದೆ.

ಅತ್ಯಂತ ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದಿಢೀರ್ ಬೆಳವಣಿಗೆಯಲ್ಲಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಸಸಿಕಾಂತ್ ಸೆಂಥಿಲ್ ಜಿಲ್ಲೆಯ ಜನರ ಅಚ್ಚುಮೆಚ್ಚಿನ ಜಿಲ್ಲಾಧಿಕಾರಿ ಎನ್ನುವ ಹೆಸರನ್ನೂ ಗಳಿಸಿದ್ದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ 2 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದ್ದ ಕೆಲವೇ ಕೆಲವು ಜಿಲ್ಲಾಧಿಕಾರಿಗಳಲ್ಲಿ ಇವರೂ ಒಬ್ಬರು.

ಕಳೆದ ವಾರದಿಂದ ರಜೆಯಲ್ಲಿ ತೆರಳಿದ್ದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಇಂದು ತನ್ನ ಹುದ್ದೆಗೆ ಹಾಗೂ ಭಾರತೀಯ ಸೇವಾ ಆಯೋಗಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ‌. ತನ್ನ ರಾಜೀನಾಮೆ ಪತ್ರದಲ್ಲಿ ದೇಶದಲ್ಲಿ ನಡೆಯುತ್ತಿರುವ ಪ್ರಸ್ತುತ ಬೆಳವಣಿಗೆಯ ಕುರಿತೂ ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಒರ್ವ ನಾಗರಿಕ ಸೇವಾ ಅಧಿಕಾರಿಯಾಗಿ ಕಾರ್ಯನಿರ್ವಹಿಸೋದು ಸಾಧ್ಯವಿಲ್ಲ ಎನ್ನುವ ವಿಷಾದದ ಮಾತನ್ನೂ ಉಲ್ಲೇಖಿಸಿದ್ದಾರೆ.

ಕಳೆದ ತಿಂಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿ ತಲೆದೋರಿದ ಪ್ರವಾಹ ಪರಿಸ್ಥಿತಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ ಜನಮೆಚ್ಚುಗೆಗೂ ಪಾತ್ರರಾಗಿದ್ದರು. ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ತಲೆದೋರಿದ್ದ ಮರಳು ಸಮಸ್ಯೆ ಪರಿಹಾರ ಹಾಗೂ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಿರುವುದೇ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ಹಿಂದಿರುವ ಬಲವಾದ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಮರಳನ್ನು ಆ್ಯಪ್ ಮೂಲಕ ಪೂರೈಸುವ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಇಪ್ಪತ್ತರಿಂದ ಮೂವತ್ತು ಸಾವಿರಕ್ಕೆ ಸಿಗುತ್ತಿದ್ದ ಮರಳನ್ನುಬಕೇವಲ ಆರು ಸಾವಿರಕ್ಕೆ ದೊರೆಯುವಂತೆ ಮಾಡುವ ಮೂಲಕ ಜಿಲ್ಲೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನು ಇರಿಸಿದ್ದರು. ಇದರಿಂದಾಗಿ ಜಿಲ್ಲಾಧಿಕಾರಿ ಮರಳು ಮಾಫಿಯಾ ಹಾಗೂ ಅವರಿಗೆ ಬೆಂಗಾವಲಾಗಿ ನಿಂತಿದ್ದ ರಾಜಕೀಯ ಮುಖಂಡರ ಕೆಂಗಣ್ಣಿಗೂ ಗುರಿಯಾಗಿದ್ದರು. ಅಧಿಕಾರಾವಧಿಯಲ್ಲಿ ಎಲ್ಲಾ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಅತ್ಯಂತ ಸ್ನೇಹದಿಂದ ನೋಡಿಕೊಳ್ಳುತ್ತಿದ್ದ ಜಿಲ್ಲಾಧಿಕಾರಿಗಳ ಈ ದಿಢೀರ್ ನಿಲುವು ಹಲವರಲ್ಲಿ ಬೇಸರ ಮೂಡಿಸಿದೆ.

ಜಿಲ್ಲಾಧಿಕಾರಿ ಗಳ ಈ ರಾಜೀನಾಮೆ ವಿಚಾರ ಇದೀಗ ವಿರೋಧ ಪಕ್ಷಗಳಿಗೆ ಒಂದು ರಾಜಕೀಯ ಅಸ್ತ್ರ ದೊರಕುವಂತೆಯೂ ಮಾಡಿದೆ. ವಿಪಕ್ಷಗಳು ಇದೀಗ ಈ ವಿಚಾರವನ್ನು ತಮ್ಮ ರಾಜಕೀಯಕ್ಕಾಗಿಯೂ ಬಳಸಿಕೊಳ್ಳುತ್ತಿದ್ದು, ಆಡಳಿತ ಪಕ್ಷಗಳ ವೈಫಲ್ಯವೇ ಇದಕ್ಕೆ ಕಾರಣ ಎನ್ನುವ ಆರೋಪವನ್ನೂ ಮಾಡಲಾರಂಭಿಸಿದೆ.

ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಹಠಾತ್‌ ರಾಜೀನಾಮೆ ರಾಜಕೀಯ ವಲಯ ಸೇರಿದಂತೆ ಸಾರ್ವಜನಿಕ ವಲಯದಲ್ಲೂ ಭಾರೀ ಚರ್ಚೆಗೆ ಎಡೆಮಾಡಿದೆ. ಸ್ವತ ಜಿಲ್ಲಾಧಿಕಾರಿಗಳೇ ಈ ಬಗ್ಗೆ ಸ್ಪಷ್ಟನೆ ನೀಡುವವರೆಗೂ ಎಲ್ಲಾ ಗೊಂದಲಗಳೂ ಹಾಗೆಯೇ ಮುಂದುವರಿಯಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *