BELTHANGADI
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಸಮೀರ್ ವಿಡಿಯೋ ಡಿಲೀಟ್ ಮಾಡಲು ಕೋರ್ಟ್ ಆದೇಶ

ಬೆಂಗಳೂರು ಮಾರ್ಚ್ 22: ರಾಜ್ಯದಲ್ಲಿ ಸಂಚಲನ ಮೂಡಿಸಿದ ಯೂಟ್ಯೂಬರ್ ಸಮೀರ್ ಎಂಡಿ ಅವರ ವಿಡಿಯೋವನ್ನು ಯೂಟ್ಯೂಬ್ ನಿಂದ ತೆಗೆದು ಹಾಕಲು ಕೋರ್ಟ್ ಆದೇಶಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ’ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ಅಂಗಸಂಸ್ಥೆಗಳ ಪರವಾಗಿ ಎ.ಎಸ್.ಸುಖೇಶ್ ಮತ್ತು ಶೀನಪ್ಪ ಸೇರಿದಂತೆ ನಾಲ್ವರು ಸಲ್ಲಿಸಿರುವ ಅಸಲು ದಾವೆ ವಿಚಾರಣೆ ನಡೆಸಿದ ಸಿಸಿಎಚ್ 11ನೇ ನ್ಯಾಯಾಲಯದ ನ್ಯಾಯಾಧೀಶ ಎನ್.ಎಸ್.ನಟರಾಜ್ ಈ ಕುರಿತಂತೆ ಆದೇಶಿಸಿ ವಿಚಾರಣೆ ಮುಂದೂಡಿದ್ದಾರೆ.
‘ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಯೂ-ಟ್ಯೂಬ್, ಫೇಸ್ ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಮತ್ತು ಅಜಾಗೂರಕ ಆರೋಪಗಳನ್ನು ಹೊತ್ತ ಸುದ್ದಿಗಳನ್ನು ಮತ್ತು ವಿಡಿಯೊಗಳನ್ನು ನಿರ್ಮಿಸುವುದು, ಬಿತ್ತರಿಸುವುದು, ಪ್ರಕಟಿಸುವುದು, ರವಾನಿಸುವುದು, ಅಪ್‌ಲೋಡ್ ಮಾಡುವುದು, ಮತ್ತೊಬ್ಬರಿಗೆ ಕಳುಹಿಸುವುದು, ಹಂಚಿಕೊಳ್ಳುವುದೂ ಸೇರಿದಂತೆ ಅವುಗಳ ಬಿತ್ತರಿಸುವಿಕೆಯನ್ನು ಶಾಶ್ವತವಾಗಿ ನಿರ್ಬಂಧಿಸಬೇಕು’ ಎಂದು ವಾದಿಗಳು ಕೋರಿದ್ದಾರೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ರಾಜಶೇಖರ ಎಸ್.ಹಿಲಿಯಾರು ವಾದ ಮಂಡಿಸಿದರು.

ಪ್ರತಿವಾದಿಯಾಗಿರುವ ಎಂ ಡಿ ಸಮೀರ್, ಧೂತ ಸಮೀರ್ ಎಂ ಡಿ ಯೂಟ್ಯೂಬ್ ಚಾನಲ್, ಸಮೀರ್ ಎಂ ಡಿ ಯೂಟ್ಯೂಬ್ ಚಾನಲ್ ಮತ್ತು ಅವರ ಬೆಂಬಲಿಗರು ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ದ ಯಾವುದೇ ತೆರನಾದ ಆಧಾರರಹಿತ ಸುದ್ದಿ/ಮಾಹಿತಿ/ವಿಚಾರ ಪ್ರಸಾರ/ಹಂಚಿಕೆ ಮಾಡದಂತೆ ನ್ಯಾಯಾಲಯವು ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.
ಅಲ್ಲದೇ, ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ದ ಯೂಟ್ಯೂಬ್ ಎಲ್‌ಎಲ್‌ಸಿ, ಇನ್‌ಸ್ಟಾಗ್ರಾಂ ಎಲ್‌ಎಲ್‌ಸಿ, ಫೇಸ್‌ಬುಕ್, ಗೂಗಲ್, ಮೆಟಾದಲ್ಲಿ ಮಾಡಿರುವ ಆಧಾರರಹಿತ ಆರೋಪಗಳನ್ನು ಉಲ್ಲೇಖಿತ ಯುಆರ್‌ಎಲ್‌ಗಳನ್ನು ತೆಗೆದು ಹಾಕಬೇಕು ಎಂದು ಏಕಪಕ್ಷೀಯ ಮಧ್ಯಂತರ ಕಡ್ಡಾಯ ಪ್ರತಿಬಂಧಕಾದೇಶ ಮಾಡಿ ನ್ಯಾಯಾಲಯ ಆದೇಶಿಸಿದೆ.
“ಈಗ ಇಂಟರ್‌ನೆಟ್ ಮೂಲಕ ಸಂವಹನವು ತಕ್ಷಣಕ್ಕೆ ಸಾಧ್ಯವಿದ್ದು, ವಿಸ್ತೃತ ನೆಲೆಯಲ್ಲಿ ಸಾಕಷ್ಟು ಪರಿಣಾಮ ಉಂಟು ಮಾಡಲಿದೆ. ತಂತ್ರಜ್ಞಾನದಲ್ಲಿ ಬದಲಾವಣೆಯಾಗಿರುವುದನ್ನು ಪರಿಗಣಿಸಿ ನ್ಯಾಯಾಲಯಗಳು ಹಿಂದೆಂದಿಗಿಂತಲೂ ಈಗ ವಿಶೇಷವಾಗಿ ಮಧ್ಯಂತರ ಪ್ರತಿಬಂಧಕಾದೇಶ ಮಾಡುವಾಗ ಹೆಚ್ಚು ವಾಸ್ತವಿಕವಾಗಬೇಕಾಗುತ್ತದೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ. ಅಲ್ಲದೇ, ಎಲ್ಲಾ ಪ್ರತಿವಾದಿಗಳಿಗೂ ಸಮನ್ಸ್ ಜಾರಿ ಮಾಡಿ, ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ.
ಈ ಹಿನ್ನೆಲೆಯಲ್ಲಿ ಸಮೀರ್ ಯೂಟ್ಯೂಬ್ ಚಾನಲ್‌ನಿಂದ ʼಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?ʼ ತೆಗೆದು ಹಾಕಲಾಗಿದ್ದು, ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ವಿಡಿಯೋ ತೆಗೆಯಲಾಗಿದೆ ಎಂಬ ಒಕ್ಕಣೆ ಬರುತ್ತಿದೆ. 27-02-2025ರಂದು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದ್ದ ಈ ವಿಡಿಯೋವನ್ನು ಸರಿಸುಮಾರು 2 ಕೋಟಿ ಮಂದಿ ವೀಕ್ಷಿಸಿದ್ದಾರೆ.