DAKSHINA KANNADA
ಸಾಲ್ಮರ – ಕೂಲಿ ಕಾರ್ಮಿಕನ ಮೃತದೇಹ ರಸ್ತೆ ಬದಿ ಇರಿಸಿದ ಪ್ರಕರಣ – ಪ್ರಮುಖ ಆರೋಪಿ ಹೆನ್ರಿ ತಾವೋ ಅರೆಸ್ಟ್
ಪುತ್ತೂರು ನವೆಂಬರ್ 25: ಮೃತಪಟ್ಟ ಕೂಲಿ ಕಾರ್ಮಿಕನ ಶವವನ್ನು ಮನೆಯ ಹತ್ತಿರದ ರಸ್ತೆ ಬದಿ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹೆನ್ರಿ ತಾವೋ ಸಹಿತ ಮೂವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹೆನ್ರಿ ತಾವೋ, ಪುತ್ರ ಕಿರಣ್, ಮತ್ತು ಸಹಾಯಕ ಪ್ರಕಾಶ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕ ಶಿವಪ್ಪ ಅವರ ಮೃತ ದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ಮುಂದಿನ ರಸ್ತೆ ಸಮೀಪ ಇರಿಸಿ ಹೋದ ಘಟನೆ ನ.16ರಂದು ಸಾಲ್ಮರ ಕೆರೆಮೂಲೆಯಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಿವಪ್ಪ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕ ಹೆನ್ರಿ ತಾವೋ ಅವರ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಸ್ಪ್ಯಾನಿ ಮೇಸ್ತ್ರಿ ಎಂಬವರನ್ನು ಆರಂಭದಲ್ಲಿ ಬಂಧಿಸಿದ್ದರು. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಹೆನ್ರಿ ತಾವೋ ಅವರ ಪುತ್ರನ ವಿರುದ್ಧವೂ ಆದಿ ದ್ರಾವಿಡ ಸಂಘಟನೆ ಪೊಲೀಸರಿಗೆ ದೂರು ನೀಡಿತ್ತು. ಪ್ರಕರಣದ ಪ್ರಮುಖ ಆರೋಪಿ ಹೆನ್ರಿ ತಾವೋ ಅವರ ಬಂಧನಕ್ಕೆ ಆಗ್ರಹಿಸಿ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನ.22ರಂದು ಪ್ರತಿಭಟನೆ ನಡೆದಿತ್ತು.