LATEST NEWS
ಭೋರ್ಗರೆವ ಜಲಪಾತದಲ್ಲಿ ತಾಯಿ-ಮಗು ರಕ್ಷಿಸಿ ನೀರಿಗೆ ಬಿದ್ದ ಯುವಕರು..ಆದರೆ ಅವರು ಬದುಕಿದ್ದೇ ರೋಚಕ

ತಮಿಳುನಾಡು: ಜಲಪಾತದ ಪ್ರವಾಹದಲ್ಲಿ ಸಿಲುಕಿದ್ದ ತಾಯಿ ಮಗುವನ್ನ ಕಾಪಾಡಲು ಹೋದ ಯುವಕರು ಪ್ರವಾಹಕ್ಕೆ ಸೆಡ್ಡು ಹೊಡೆದು ದಡ ಸೇರಿದ ಘಟನೆ ತಮಿಳುನಾಡಿನ ಸೇಲಂನ ಅತ್ತೂರು ಬೆಟ್ಟದಲ್ಲಿ ನಡೆದಿದ್ದು, ರಕ್ಷಣಾ ಕಾರ್ಯದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದು ತಮಿಳುನಾಡಿನ ಸೇಲಂ ಜಿಲ್ಲೆಯ ಅತ್ತೂರ್ ಬಳಿಯ ಕಲ್ಲವರಾಯನ್ ಬೆಟ್ಟದಲ್ಲಿರುವ ಅನೈವಾರಿ ಮುಟ್ಟಲ್ ಜಲಪಾತದ ಬಳಿ ನಡೆದ ಘಟನೆ. ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ತಾಯಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಕೋವಿಡ್-19 ಕಾರಣದಿಂದ ಜಾರಿಯಾಗಿದ್ದ ನಿರ್ಬಂಧವನ್ನು ಎರಡು ತಿಂಗಳ ಹಿಂದಷ್ಟೇ ಸಡಿಲಿಸಿ ಸಾರ್ವಜನಿಕರಿಗಾಗಿ ಇದನ್ನು ಪುನಃ ತೆರೆಯಲಾಗಿತ್ತು. ಹೀಗಾಗಿ, ಇಲ್ಲಿನ ಸೌಂದರ್ಯ ಸವಿಯಲು ಬಂದಿದ್ದ ಇವರು ಇಲ್ಲಿ ಕಷ್ಟಕ್ಕೆ ಸಿಲುಕಿದ್ದರು.

ಈ ಜಲಪಾತ ಅತ್ತೂರು ಪ್ರದೇಶದಲ್ಲಿದೆ. ಈ ಬೆಟ್ಟದ ಇನ್ನೊಂದು ಬದಿಯಲ್ಲಿರುವ ಕರ್ಮಂಡುರೈ ಪ್ರದೇಶದಲ್ಲಿ ಮಳೆಯಾದರೆ ಅದು ಇಲ್ಲಿರುವವರಿಗೆ ಗೊತ್ತಾಗುವುದಿಲ್ಲ. ಆದರೆ, ಕೇವಲ 20-30 ನಿಮಿಷದೊಳಗೆ ಪ್ರವಾಹದ ನೀರು ಈ ಪ್ರದೇಶವನ್ನು ತಲುಪುತ್ತದೆ. ಹೀಗಾಗಿ, ಜನ ಜಲಪಾತದ ಬಳಿ ಸಿಲುಕಿಕೊಳ್ಳುತ್ತಾರೆ. ಹೀಗೆ ಸಿಲುಕಿಕೊಂಡಾಗ ಇನ್ನೊಂದು ಬದಿಗೆ ಹೋಗಲು ದಾರಿ ಇಲ್ಲ. ಹಗ್ಗದ ಸಹಾಯದಿಂದಲೇ ಇವರು ಸುರಕ್ಷಿತ ಜಾಗಕ್ಕೆ ಬರಬೇಕಾಗುತ್ತದೆ. ಇಂತಹ ಸಂದರ್ಭವನ್ನು ನಿಭಾಯಿಸಲು ಅರಣ್ಯ ಇಲಾಖೆ ಸಿಬ್ಬಂದಿ ತರಬೇತಿ ಪಡೆದಿದ್ದರಿಂದ, ಅವರು ಸಾರ್ವಜನಿಕರನ್ನು ಸುರಕ್ಷಿತವಾಗಿ ರಕ್ಷಿಸಲು ಸಾಧ್ಯವಾಗಿತ್ತು.