LATEST NEWS
ದುರಂತ ಮರುಕಳಿಸಿದರೆ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರಿಗೆ ನಿರ್ಬಂಧ…!!
ಉಡುಪಿ ಎಪ್ರಿಲ್ 29: ಉಡುಪಿ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಇದೀಗ ನಿರ್ಬಂಧದ ಭೀತಿ ಎದುರಿಸುತ್ತಿದ್ದು, ಇತ್ತಿಚೆಗೆ ನಡೆದ ಪ್ರವಾಸಿಗರ ಸಾವಿನ ಪ್ರಕರಣಗಳಿಂದಾಗಿ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ನೀಡಿದ್ದು, ದುರಂತ ಮರುಕಳಿಸಿದರೆ ದ್ವೀಪಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಉದಯ ಶೆಟ್ಟಿ ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಧ್ಯಕ್ಷತೆಯಲ್ಲಿ ಗುರುವಾರ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ಅವರ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತರು, ಈಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿ ಸಭೆ ನಡೆದಿದ್ದು, ಸೇಂಟ್ ಮೇರಿಸ್ ದ್ವೀಪದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ದ್ವೀಪದಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದ್ದು, ತಡೆಬೇಲಿ ಹಾಕಲಾಗಿದೆ. ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ. ಸೆಲ್ಫಿ ತೆಗೆದುಕೊಳ್ಳಲು ಸ್ಥಳಗಳನ್ನು ಗುರುತಿಸಲಾಗಿದೆ. ಪ್ರವೇಶ ದ್ವಾರದಲ್ಲಿ ಪ್ರವಾಸಿಗರಿಗೆ ದ್ವೀಪದ ಬಗ್ಗೆ ಮಾಹಿತಿ ಹಾಗೂ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಲಾಗುವುದು. ನಿಯಮ ಉಲ್ಲಂಘಿಸಿ ಸಮುದ್ರಕ್ಕೆ ಇಳಿದವರಿಗೆ ದಂಡ ವಿಧಿಸಲಾಗುವುದು. ದ್ವೀಪದಲ್ಲಿ ಏಕಕಾಲಕ್ಕೆ 500ಕ್ಕಿಂತ ಹೆಚ್ಚು ಪ್ರವಾಸಿಗರಕ್ಕೆ ಪ್ರವೇಶ ನೀಡಬಾರದು ಎಂಬ ಷರತ್ತು ವಿಧಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.