Connect with us

LATEST NEWS

ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ಸೀನಿಯರ್ಸ್‌ ತಂಡಕ್ಕೆ

ಮುಂಬೈ, ಜನವರಿ 03: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ಸೀನಿಯರ್ಸ್‌ ತಂಡಕ್ಕೆ ಮೊಟ್ಟಮೊದಲ ಬಾರಿಗೆ ಪ್ರವೇಶ ಪಡೆದಿದ್ದಾರೆ. ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೆ 21 ವರ್ಷದ ಎಡಗೈ ವೇಗ ಬೌಲರ್ ಅರ್ಜುನ್ ಕೊನೇಕ್ಷಣದಲ್ಲಿ ಮುಂಬೈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವ ತಂಡಗಳ ಸದಸ್ಯರ ಸಂಖ್ಯೆಯನ್ನು ಬಿಸಿಸಿಐ 20ರಿಂದ 22ಕ್ಕೆ ಏರಿಸಿರುವುದರಿಂದ ಅರ್ಜುನ್‌ಗೆ ಅದೃಷ್ಟ ಒಲಿದುಬಂದಿದೆ. ತಂಡದ 21 ಮತ್ತು 22ನೇ ಸದಸ್ಯರಾಗಿ ಅರ್ಜುನ್ ಜತೆಗೆ ಮತ್ತೋರ್ವ ಯುವವೇಗಿ ಕೃತಿಕ್ ಹನಗವಾಡಿಗೆ ಸ್ಥಾನ ಕಲ್ಪಿಸಲಾಗಿದೆ.

ಈ ಮುನ್ನ ಆಯ್ಕೆ ಟ್ರಯಲ್ಸ್ ರೂಪದಲ್ಲಿ ನಡೆದ ಅಭ್ಯಾಸ ಪಂದ್ಯಗಳಲ್ಲಿ ಸಾಧಾರಣ ನಿರ್ವಹಣೆ ತೋರಿದ್ದ ಕಾರಣದಿಂದಾಗಿ ಅರ್ಜುನ್‌ಗೆ ಮುಂಬೈ ತಂಡದಲ್ಲಿ ಸ್ಥಾನ ನೀಡಲಾಗಿರಲಿಲ್ಲ.

ಆದರೆ ಬಿಸಿಸಿಐ ಇದೀಗ ಟೂರ್ನಿಯ ಬಯೋಬಬಲ್‌ನಲ್ಲಿ 22 ಆಟಗಾರರಿರಲು ಅವಕಾಶ ಕಲ್ಪಿಸಿರುವುದರಿಂದ ಮತ್ತು ನೆಟ್ ಬೌಲರ್ ಅಥವಾ ಬದಲಿ ಆಟಗಾರರಾಗಿ ಹೊರಗಿನವರನ್ನು ಸೇರಿಸಿಕೊಳ್ಳಲು ಅವಕಾಶ ನಿರಾಕರಿಸಿರುವುದರಿಂದ ಮುಂಬೈ ತಂಡಕ್ಕೆ ಹೆಚ್ಚುವರಿ ಸದಸ್ಯರಾಗಿ ವೇಗದ ಬೌಲರ್‌ಗಳನ್ನೇ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಮೂಲಗಳು ತಿಳಿಸಿವೆ. ಅರ್ಜುನ್ ಈ ಮುನ್ನ ಭಾರತದ 19 ವಯೋಮಿತಿ ತಂಡದಲ್ಲಿ ಆಡಿದ್ದರು. ಅಲ್ಲದೆ ಮುಂಬೈನ ವಿವಿಧ ವಯೋಮಿತಿ ತಂಡಗಳಲ್ಲಿ ಸ್ಥಾನ ಪಡೆದಿದ್ದರು.

ಸೂರ್ಯಕುಮಾರ್ ಯಾದವ್ ಸಾರಥ್ಯದ ಮುಂಬೈ ತಂಡ ಇ ಗುಂಪಿನಲ್ಲಿದ್ದು, ಪುದುಚೇರಿಯಲ್ಲಿ ಜನವರಿ 11ರಿಂದ 19ರವರೆಗೆ ಲೀಗ್ ಪಂದ್ಯಗಳನ್ನು ಆಡಲಿದೆ. ಅರ್ಜುನ್, ಕೃತಿಕ್ ಜತೆಗೆ ತುಷಾರ್ ದೇಶಪಾಂಡೆ, ಧವಳ್ ಕುಲಕರ್ಣಿ, ಮಿನಾದ್ ಮಂಜ್ರೆಕರ್ ಮತ್ತು ಪ್ರಥಮೇಶ್ ಡೇಕ್ ತಂಡದಲ್ಲಿರುವ ವೇಗಿಗಳಾಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *