LATEST NEWS
ಅಯೋಧ್ಯೆ ತೀರ್ಪಿನ ನಂತರ ಕುತೂಹಲ ಮೂಡಿಸಿರುವ ಶಬರಿಮಲೆಗೆ ಸ್ತ್ರೀ ಪ್ರವೇಶ ಪ್ರಕರಣ, ನಾಳೆ ಸುಪ್ರೀಂ ತೀರ್ಪು…
ಅಯೋಧ್ಯೆ ತೀರ್ಪಿನ ನಂತರ ಕುತೂಹಲ ಮೂಡಿಸಿರುವ ಶಬರಿಮಲೆಗೆ ಸ್ತ್ರೀ ಪ್ರವೇಶ ಪ್ರಕರಣ, ನಾಳೆ ಸುಪ್ರೀಂ ತೀರ್ಪು…
ಮಂಗಳೂರು, ನವೆಂಬರ್ 13: ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಮರುಪರಿಶೀಲನೆ ಅರ್ಜಿಗಳ ಕುರಿತಂತೆ ಸುಪ್ರೀಂ ಕೋರ್ಟ್ ಗುರುವಾರ ತನ್ನ ತೀರ್ಪನ್ನು ಪ್ರಕಟಿಸಲಿದೆ. ಅಯೋಧ್ಯೆಯ ನಂತರ ದೇಶದಾದ್ಯಂತ ಭಾರಿ ಕುತೂಹಲ ಮೂಡಿಸಿರುವ ತೀರ್ಪು ಇದಾಗಿದ್ದು, ಕೇರಳದಾದ್ಯಂತ ಈಗಾಗಲೇ ಬಿಗಿ ಬಂದೋಬಸ್ತ ಕಲ್ಪಿಸಲಾಗಿದೆ.
ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ 12 ವರ್ಷ ಮೇಲಿನ ಹಾಗೂ 50 ವರ್ಷ ಕೆಳಗಿನ ಮಹಿಳೆಯರಿಗೆ ಪ್ರವೇಶವನ್ನು ಅನಾಧಿ ಕಾಲದಿಂದಲೂ ನಿಷೇಧಿಸಲಾಗಿದ್ದು, ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿಯಾಗಿರುವ ಕಾರಣಕ್ಕಾಗಿ ಈ ಕಟ್ಟುಪಾಡು ಹಿಂದಿನ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ ಎನ್ನುವುದು ಕ್ಷೇತ್ರದ ಭಕ್ತರ ನಂಬಿಕೆಯಾಗಿದೆ.
ಆದರೆ ಸುಪ್ರೀಂಕೋರ್ಟ್ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಅವಕಾಶ ಕಲ್ಪಿಸಿ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್ ನ ನಂತರ ಭಕ್ತರ ಭಾರೀ ವಿರೋಧದ ನಡುವೆಯು ಕಳೆದ ಭಾರಿ ದೇವಸ್ಥಾನದ ಬಾಗಿಲು ತೆರೆದ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಕೇರಳ ಪೋಲೀಸರ ಭದ್ರತೆಯೊಂದಿಗೆ ದೇವರ ದರ್ಶನವನ್ನು ಪಡೆದಿದ್ದರು. ಆ ಬಳಿಕದ ಬೆಳವಣಿಗೆಯಲ್ಲಿ ಕ್ಷೇತ್ರದ ತಂತ್ರಿಗಳು ಕ್ಷೇತ್ರವನ್ನು ಶುದ್ಧೀಕರಿಸುವ ಮೂಲಕ ಮಹಿಳೆಯರ ದರ್ಶನಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ನವೆಂಬರ್ 16 ರಿಂದ ಮತ್ತೆ ಕೇತ್ರದ ಬಾಗಿಲು ತೆರೆಯಲಿದೆ. ಕೇರಳದ ಎಲ್ಲಾ ರಾಜಕೀಯ ಪಕ್ಷಗಳೂ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿ ತಿಂಗಳ ಕಾಲ ಪ್ರತಿಭಟನೆಯನ್ನೂ ನಡೆಸಿದೆ. ಈ ನಡುವೆ ನಾಳೆ ಮತ್ತೆ ಈ ವಿಚಾರ ಕುರಿತಂತೆ ಸುಪ್ರೀಂಕೋರ್ಟ್ ತನ್ನ ತೀರ್ಪು ಪ್ರಕಟಿಸಲಿದ್ದು, ಎಲ್ಲಾ ಚಿತ್ತ ಇದೀಗ ಸುಪ್ರೀಂಕೋರ್ಟ್ ನ ತೀರ್ಪಿನತ್ತ ಇದೆ.
ಕೇರಳ ದೈವಸ್ಯಂ ಬೋರ್ಡ್ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಸುಪ್ರೀಕೋರ್ಟ್ ನ ಆದೇಶಕ್ಕೆ ತಾವು ಬದ್ಧವಿರುವುದಾಗಿ ಹೇಳಿಕೊಂಡಿದೆ. ಈ ನಡುವೆ ಮಹಿಳೆಯರ ಪ್ರವೇಶಕ್ಕೆ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದು, ನಾಳಿನ ತೀರ್ಪು ಶಬರಿಮಲೆಯಲ್ಲಿ ಮತ್ತೆ ಗೊಂದಲದ ವಾತಾವರಣ ನಿರ್ಮಿಸುವ ಸಾಧ್ಯತೆಯಿದೆ.