UDUPI
ಆರ್ ಟಿಸಿ ಇನ್ನು ಬ್ಲಾಕ್ ಆಂಡ್ ವೈಟ್
ಆರ್ ಟಿಸಿ ಇನ್ನು ಬ್ಲಾಕ್ ಆಂಡ್ ವೈಟ್
ಉಡುಪಿ, ಸೆಪ್ಟೆಂಬರ್ 22: ಕಂದಾಯ ಇಲಾಖೆಯಿಂದ ರೈತರಿಗೆ /ಸಾರ್ವಜನಿಕರಿಗೆ ಗಣಕೀಕೃತ ಪಹಣಿಗಳನ್ನು ವಿತರಿಸುವ ಸೌಲಭ್ಯವನ್ನು 2001 ರಿಂದ ಜಾರಿಗೆ ತರಲಾಗಿರುತ್ತದೆ. ಸರ್ಕಾರವು ಪ್ರಸ್ತುತ ನೀಲಿ ಬಣ್ಣದ ಪೂರ್ವ ಮುದ್ರಿತ ಪಹಣಿ ನಮೂನೆಯನ್ನು ಸದರಿ ನಮೂನೆಯಲ್ಲಿ ಭೂಮಿ ಡಾಟಾ ಬೇಸ್‍ನಿಂದ ಪಹಣಿಯ ಮಾಹಿತಿಯನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿತ್ತು.
ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಪಹಣಿ ಪತ್ರಿಕೆಗಳನ್ನು ಮುದ್ರಿಸಲು ಪೂರ್ವ ಮುದ್ರಿತ ಪಹಣಿ ನಮೂನೆಗಾಗಿ ಸರ್ಕಾರವು ಸರಬರಾಜುದಾರರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿತ್ತು, ಇದರಿಂದ ರೈತರಿಗೆ ಪಹಣಿಗಳ ತುರ್ತು ಅಗತ್ಯವಿದ್ದ ಸಂದರ್ಭದಲ್ಲಿ ಬ್ಯಾಂಕ್‍ಗಳಿಂದ ಅಥವಾ ಯಾವುದಾದರೂ ಸಂಸ್ಥೆಯಿಂದ ಸಾಲ ಪಡೆಯಲು, ಸರ್ಕಾರದಿಂದ ಪರಿಹಾರ ಪಡೆಯುವಾಗ, ಬೆಳೆ ವಿಮೆಗಾಗಿ ಪೂರ್ವ ಮುದ್ರಿತ ಪಹಣಿ ನಮೂನೆಯ ಸರಬರಾಜಿನಲ್ಲಿ ಸ್ವಲ್ಪ ವಿಳಂಬವಾದರೂ ಸಹ ನಿಗದಿತ ಸಮಯದಲ್ಲಿ ರೈತರು /ಸಾರ್ವಜನಿಕರು ಪಹಣಿಗಳನ್ನು ಪಡೆಯಲು ಕಷ್ಟಸಾಧ್ಯವಾಗುತ್ತಿತ್ತು.
ಈ ಹಿನ್ನಲೆಯಲ್ಲಿ ಸದರಿ ತೊಂದರೆಯನ್ನು ಅರಿತು ಸರ್ಕಾರದ ಆದೇಶದಂತೆ ಪೂರ್ವ ಮುದ್ರಿತ ಪಹಣಿ ನಮೂನೆಗಾಗಿ ಸರಬರಾಜುದಾರರ ಮೇಲೆ ಅವಲಂಭಿತವಾಗುವುದನ್ನು ತಪ್ಪಿಸಲು ತಂತ್ರಾಂಶದಲ್ಲಿಯೇ ಕಪ್ಪು ಬಿಳುಪು ಗಾತ್ರದ ಪಹಣಿಯಲ್ಲಿ ಲೀಗಲ್ ಗಾತ್ರದ ಪಹಣಿಯನ್ನು ಮುದ್ರಿಸಲು ಕ್ರಮ ಕೈಗೊಳ್ಳಲಾಗಿದೆ.
ಆರ್ ಟಿಸಿ ಕಪ್ಪು ಬಿಳುಪು ಕಲರ್ ನಲ್ಲಿ
ಸದರಿ ಕಪ್ಪು ಬಿಳುಪು ಗಾತ್ರದ ಪಹಣಿಯಲ್ಲಿ ಈ ಹಿಂದೆ ನೀಡುತ್ತಿದ್ದ, ಪಹಣಿಯಲ್ಲಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದ್ದು, ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳಾದ ವಿಶೇಷ ಪಹಣಿ ಗುರುತಿನ ಸಂಖ್ಯೆ, ಕ್ರಮ ಸಂಖ್ಯೆ, ಬಾರ್‍ಕೋಡ್, ಡಿಜಿಟಲ್ ಸಹಿಗಳನ್ನು ಒಳಗೊಂಡಿರುತ್ತದೆ ಹಾಗೂ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿರುತ್ತದೆ.
ಈಗಾಗಲೇ ಜಿಲ್ಲೆಗಳಲ್ಲಿರುವ ನೀಲಿ ಬಣ್ಣದ ಪೂರ್ವ ಮುದ್ರಿತ ಪಹಣಿ ಪ್ರತಿಗಳ ದಾಸ್ತಾನು ಖಾಲಿಯಾಗುವವರೆಗೆ ಸದರಿ ಪಹಣಿ ಪ್ರತಿಗಳನ್ನೆ ವಿತರಿಸಲಾಗುವುದು. ದಾಸ್ತಾನು ಖಾಲಿಯಾದ ತರುವಾಯ ಕಪ್ಪು ಬಿಳುಪು ಬಣ್ಣದಲ್ಲಿ ಲೀಗಲ್ ಗಾತ್ರದ ಕಾಗದದ ಮೇಲೆ ಪಹಣಿಯನ್ನು ಮುದ್ರಿಸಿ ಪಹಣಿ ಪ್ರತಿಗಳನ್ನು ವಿತರಿಸಲಾಗುವುದೆಂದು ಸೂಚಿಸಲಾಗಿರುತ್ತದೆ.
ಅದುದರಿಂದ ಸಾರ್ವಜನಿಕರು ಈ ಬದಲಾವಣೆಯನ್ನು ಗಮನದಲ್ಲಿರಿಸಿಕೊಂಡು ಯಾವುದೇ ಗೊಂದಲಕ್ಕೆ ಒಳಗಾಗದೇ ತಾಲೂಕು ಕಚೇರಿಯ ಭೂಮಿ ಕೇಂದ್ರದಲ್ಲಿ, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತ್‍ನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ಸರಕಾರದಿಂದ ಪಹಣಿ ವಿತರಿಸಲು ಅನುಮತಿ ನೀಡಿರುವ ಖಾಸಗಿ ಕೇಂದ್ರಗಳಲ್ಲಿ ವಿತರಿಸಲಾಗುವ ಪಹಣಿ ಪತ್ರಿಕೆಗಳನ್ನು ಪಡೆದು ತಮ್ಮ ಅವಶ್ಯಕತೆಗಳಿಗೆ ಬಳಸಿಕೊಳ್ಳಲು ಈ ಮೂಲಕ ಕೋರಿದೆ.
ಸಾರ್ವಜನಿಕರಿಗೆ ಪಹಣಿಯನ್ನು ನಿಗದಿತ ಸಮಯಕ್ಕೆ ಪಡೆಯಲು ಅನುಕೂಲವಾಗುವಂತೆ ಸಾರ್ವಜನಕ ಹಿತದೃಷ್ಟಿಯಿಂದ ಪಹಣಿಯಲ್ಲಿ ಈ ಬದಲಾವಣೆಯನ್ನು ತರಲಾಗಿದೆ.