ಮೈನ್ ಪುರಿ,ಮಾರ್ಚ್ 30: ತನ್ನ ಬ್ಯಾಂಕ್ ಖಾತೆಗೆ ಬರೋಬ್ಬರಿ 10 ಕೋಟಿ ರೂ. ಜಮೆ ಆಗಿದ್ದರೂ ಒಂದು ರೂಪಾಯಿಯನ್ನು ವಿಥ್ ಡ್ರಾ ಮಾಡದ ರೈತ ಮಹಿಳೆಯೊಬ್ಬರ ಪ್ರಾಮಾಣಿಕತೆ ಇದೀಗ ದೇಶಾದ್ಯಂತ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ಗಳಿಸಿದೆ. ಹೌದು. ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಅವರ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ ಬರೋಬ್ಬರಿ 9,99,49,588 ರೂ. (ಸುಮಾರು ಹತ್ತು ಕೋಟಿ) ಬ್ಯಾಲೆನ್ಸ್ ತೋರಿಸುತ್ತಿತ್ತು. ಇದನ್ನು ನಂಬಲಾಗದ ರೀಟಾ, ಮತ್ತೊಂದು ಎಟಿಎಂಗೆ ಹೋಗಿ ಪುನಃ ಪರಿಶೀಲಿಸಿದರು. ಅಲ್ಲೂ ಅಷ್ಟೇ ಮೊತ್ತ ತೋರಿಸಿದಾಗ, ಅದನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಖಾತೆಯಲ್ಲಿ ಅಷ್ಟೊಂದು ಹಣವಿದ್ದರೂ ರೀಟಾ ಆಸೆಪಡಲಿಲ್ಲ. ಬ್ಯಾಂಕ್ ಅಧಿಕಾರಿಗಳು ಬಂದು ಈ ಬಗ್ಗೆ ಸ್ಪಷ್ಟನೆ ನೀಡುವವರೆಗೆ ಆ ಹಣದಲ್ಲಿ ಒಂದು ಪೈಸೆಯನ್ನೂ ಬಳಸಬಾರದು ಎಂದು ಅವರು ತಮ್ಮ ಕುಟುಂಬ ಸದಸ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಈ ನಿರ್ಧಾರವನ್ನು ಕಂಡು ಗ್ರಾಮಸ್ಥರು ಹಾಗೂ ನೆರೆಹೊರೆಯವರು ಅವರ ಪ್ರಾಮಾಣಿಕತೆಯನ್ನು ಕೊಂಡಾಡ್ತಿದ್ದಾರೆ.
ಬ್ಯಾಂಕ್ ರಜೆ ಮುಗಿದ ನಂತರ ರೀಟಾ ಮತ್ತು ಅವರ ಕುಟುಂಬದವರು ಮ್ಯಾನೇಜರ್ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ಬ್ಯಾಂಕ್ ಆಫ್ ಇಂಡಿಯಾದ ಕರೀಮ್ಗಂಜ್ ಶಾಖೆಯ ವ್ಯವಸ್ಥಾಪಕ ರಿಷಿಕಾಂತ್ ಪಾಂಡೆ ಅವರು ಮಾತನಾಡಿ, ‘ಇದು ತಾಂತ್ರಿಕ ದೋಷ ಅಥವಾ ವಹಿವಾಟಿನ ತಪ್ಪಿನಿಂದ ಸಂಭವಿಸಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಸಿ ಶೀಘ್ರವೇ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ. ಬಡತನದ ನಡುವೆಯೂ ಕೋಟ್ಯಂತರ ರೂಪಾಯಿ ಹಣದ ಆಮಿಷಕ್ಕೆ ಒಳಗಾಗದ ರೀಟಾ ಅವರ ಪ್ರಾಮಾಣಿಕತೆ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.