LATEST NEWS
ಒಂದು ಕಿಸ್ಗೆ 50 ಸಾವಿರ ರೂ!: ಬೆಂಗಳೂರಿನಲ್ಲಿ ಖತರ್ನಾಕ್ ಟೀಚರ್, ಹನಿಟ್ರ್ಯಾಪ್ ಗ್ಯಾಂಗ್ ಬಂಧನ

ಬೆಂಗಳೂರು, ಏಪ್ರಿಲ್ 1: ಪ್ರಿ ಸ್ಕೂಲ್ಗೆ ಬರುತ್ತಿದ್ದ ಮಕ್ಕಳ ತಂದೆಗೇ ಮುತ್ತು ಕೊಟ್ಟು ಹನಿಟ್ರ್ಯಾಪ್ ಮಾಡಿದ್ದಲ್ಲದೆ, 50 ಸಾವಿರ ರೂ. ಸುಲಿಗೆ ಮಾಡಿದ್ದಾಳೆ. ಮತ್ತೆ ಬೆದರಿಕೆಯೊಡ್ಡಿ ಒಂದು ಲಕ್ಷ ರೂಪಾಯಿಗೂ ಹೆಚ್ಚು ಹಣ ವಸೂಲಿ ಮಾಡಿದ್ದಲ್ಲದೆ, ಮತ್ತಷ್ಟು ಹಣ ವಸೂಲಿ ಮಾಡಲು ಮುಂದಾದ ಟೀಚರ್ ಹಾಗೂ ಗ್ಯಾಂಗ್ ಈಗ ಪೊಲೀಸ್ ಬಲೆಗೆ ಬಿದ್ದಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಖಾಸಗಿ ಪ್ರೀಸ್ಕೂಲ್ ನಡೆಸುತ್ತಿದ್ದ ಶ್ರೀದೇವಿ ರುಡಿಗಿ ಎಂಬಾಕೆಯೇ ಹನಿಟ್ರ್ಯಾಪ್ ಎಸಗಿದ ಶಿಕ್ಷಕಿ.
ಆರೋಪಿ ಶ್ರೀದೇವಿ ರುಡಿಗಿಗೆ 2023 ರಲ್ಲಿ ರಾಕೇಶ್ ಎಂಬ ಪೋಷಕನ ಪರಿಚಯವಾಗಿತ್ತು. ರಾಕೇಶ್ನಿಂದ ಶಾಲೆ ನಿರ್ವಹಣೆ, ತಂದೆಯ ಚಿಕಿತ್ಸೆಗೆಂದು ಶ್ರೀದೇವಿ 4 ಲಕ್ಷ ರೂ. ಸಾಲ ಪಡೆದಿದ್ದಳು. 2024ರ ಮಾರ್ಚ್ನಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು. ಆದರೆ, ಹಣ ವಾಪಸ್ ಕೇಳಿದಾಗ ಕೊಟ್ಟಿರಲಿಲ್ಲ. ‘ತುಂಬಾ ಕಷ್ಟವಿದೆ. ಹಣ ಈಗ ಕೊಡಲು ಆಗುವುದಿಲ್ಲ. ನೀವು ಶಾಲೆಯ ಪಾರ್ಟನರ್ ಆಗಿ’ ಎಂದಿದ್ದಳು. ನಂತರ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಇಬ್ಬರೂ ಹಲವೆಡೆ ಜತೆಯಾಗಿ ಸುತ್ತಾಟ ನಡೆಸಿದ್ದಾರೆ. ಶ್ರೀದೇವಿ ಜೊತೆ ಮಾತನಾಡಲೆಂದೇ ರಾಕೇಶ್ ಹೊಸ ಸಿಮ್ ಹಾಗೂ ಪೋನ್ ಖರೀದಿಸಿದ್ದರು. ಆದರೆ, ನಂತರ ಜನವರಿ ಮೊದಲ ವಾರದಲ್ಲಿ ಹಣ ವಾಪಸ್ ಕೇಳಿದ್ದರು. ಹಣ ವಾಪಸ್ ಕೇಳಿದ್ದ ರಾಕೇಶ್ಗೆ, ‘ನಿನ್ನ ಜೊತೆ ರಿಲೇಶನ್ ಶಿಪ್ನಲ್ಲಿ ಇರುತ್ತೇನೆ’ ಎಂದು ಹೇಳಿದ್ದ ಶ್ರೀದೇವಿ 15 ಲಕ್ಷ ರೂ. ಹಣ ಕೇಳಿದ್ದಳು. ಇದಕ್ಕೆ ರಾಕೇಶ್ ಒಪ್ಪಿರಲಿಲ್ಲ.

ನಂತರ ಶ್ರೀದೇವಿ ಪೋಷಕ ರಾಕೇಶ್ ಮನೆಗೆ ತೆರಳಿ ಆತನಿಗೆ ಮುತ್ತುಕೊಟ್ಟಿದ್ದಳು. ಬಳಿಕ ಬ್ಲ್ಯಾಕ್ಮೇಲ್ ಮಾಡಿ 50 ಸಾವಿರ ರೂ. ಪಡೆದಿದ್ದಳು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆ ಬಳಿಕ, ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಆಕೆ ಜತೆ ಸಂಪರ್ಕಕ್ಕೆ ಇಟ್ಟುಕೊಂಡಿದ್ದ ಸಿಮ್ ಕಾರ್ಡ್ ಅನ್ನು ರಾಕೇಶ್ ಮುರಿದು ಬಿಸಾಡಿದ್ದರು.
ಮಾರ್ಚ್ 12 ರಂದು ರಾಕೇಶ್ ಪತ್ನಿಗೆ ಕರೆ ಮಾಡಿದ್ದ ಶ್ರೀದೇವಿ , ಮಕ್ಕಳ ಸ್ಕೂಲ್ ಟಿಸಿ ಕಳುಹಿಸಿಕೊಡುತ್ತೇನೆ, ನಿಮ್ಮ ಪತಿಯನ್ನು ಕಳುಹಿಸಿ ಎಂದಿದ್ದಳು. ಅದರಂತೆ ಶ್ರೀದೇವಿಯ ಪ್ರೀ ಸ್ಕೂಲ್ಗೆ ರಾಕೇಶ್ ತೆರಳಿದ್ದರು. ಆಗ ಅಲ್ಲಿ ಶ್ರೀದೇವಿ ಜೊತೆ ಹಾಜರಿದ್ದ ಇತರೆ ಆರೋಪಿಗಳಾದ ಸಾಗರ್ ಹಾಗೂ ಗಣೇಶ್ ಬೆದರಿಕೆ ಹಾಕಿದ್ದರು. ‘‘ಸಾಗರ್ ಜೊತೆ ಶ್ರೀದೇವಿಗೆ ನಿಶ್ಚಿತಾರ್ಥ ಆಗಿದೆ. ಆದರೆ ನೀನು ಆಕೆ ಜೊತೆ ಮಜಾ ಮಾಡುತ್ತಿದ್ದಿ’’ ಎಂದು ಆರೋಪಿ ಗಣೇಶ್ ಬೆದರಿಕೆ ಹಾಕಿದ್ದ. ಬಳಿಕ ಕಾರಿನಲ್ಲಿ ಕೂರಿಸಿಕೊಂಡು, ‘‘ಯಾರಿಗೂ ವಿಚಾರ ಹೇಳಬಾರದು ಎಂದರೆ 1 ಕೋಟಿ ರೂ. ಕೊಡು’’ ಎಂದು ಬ್ಲ್ಯಾಕ್ಮೇಲ್ ಮಾಡಿದ್ದ. ಕೊನೆಯದಾಗಿ ಆರೋಪಿಗಳು 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. 1.90 ಲಕ್ಷ ರೂ. ಹಣ ಪಡೆದು ಬಿಟ್ಟು ಕಳುಹಿಸಿದ್ದರು. ಆದರೆ, ಉಳಿದ ಹಣ ನೀಡುವಂತೆ ಪ್ರಾಣ ಬೆದರಿಕೆ ಹಾಕಿದ್ದರು ಎಂದು ರಾಕೇಶ್ ಆರೋಪಿಸಿದ್ದಾರೆ.
ಹೀಗಾಗಿ ರಾಕೇಶ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಶ್ರೀದೇವಿ, ಅರುಣ್ ಮತ್ತು ಸಾಗರ್ರನ್ನು ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಮೂವರು ಆರೋಪಿಗಳು ಕೂಡ ವಿಜಯಪುರ ಮೂಲದವರಾಗಿದ್ದಾರೆ.